×
Ad

ಕ್ಷಯ ಔಷಧಗಳ ಕೊರತೆ: ಪ್ರಧಾನಿ ಮೋದಿಗೆ ಪತ್ರ ಬರೆದ 113 ಜಾಗತಿಕ ಸಂಸ್ಥೆಗಳು; ತುರ್ತು ಮಧ್ಯಪ್ರವೇಶಕ್ಕೆ ಮನವಿ

ಕ್ಷಯ ರೋಗದ ಔಷಧಿಗಳ ಕೊರತೆಯಾಗಿರುವ ಕುರಿತು ಜಗತ್ತಿನ ಸುಮಾರು 113 ನಾಗರಿಕ ಸೇವಾ ಸಂಸ್ಥೆಗಳು ಹಾಗೂ 776 ಮಂದಿ ಪ್ರತಿಷ್ಠಿತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಆರೋಗ್ಯ ಸಚಿವ ಮನ್ಷುಕ್ ಮಾಂಡವಿಯಾ ಅವರಿಗೆ ಪತ್ರ ಬರೆದು, ತುರ್ತು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ

Update: 2023-09-30 18:26 IST

PHOTO : PTI

ಹೊಸದಿಲ್ಲಿ: ಕ್ಷಯ ರೋಗದ ಔಷಧಿಗಳ ಕೊರತೆಯಾಗಿರುವ ಕುರಿತು ಜಗತ್ತಿನ ಸುಮಾರು 113 ನಾಗರಿಕ ಸೇವಾ ಸಂಸ್ಥೆಗಳು ಹಾಗೂ 776 ಮಂದಿ ಪ್ರತಿಷ್ಠಿತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಆರೋಗ್ಯ ಸಚಿವ ಮನ್ಷುಕ್ ಮಾಂಡವಿಯಾ ಅವರಿಗೆ ಪತ್ರ ಬರೆದು, ತುರ್ತು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ ಎಂದು thewire.in ವರದಿ ಮಾಡಿದೆ.

ಔಷಧ ನಿರೋಧಕ ಗುಣ ಬೆಳೆಸಿಕೊಂಡಿರುವ ಭಾರತೀಯ ರೋಗಿಗಳು (ಕ್ಷಯ ರೋಗಿಗಳಲ್ಲಿ ಮೊದಲ ಹಂತದ ಕ್ಷಯ ಔಷಧಗಳು ಕೆಲಸ ಮಾಡದಿರುವುದು ಮತ್ತು ಅಂಥವರಿಗೆ ಸುಧಾರಿತ ಚಿಕಿತ್ಸೆಯ ಅಗತ್ಯವಿರುವುದು) ಹಲವಾರು ತಿಂಗಳಿನಿಂದ ಔಷಧಗಳ ಕೊರತೆಯನ್ನು ಎದುರಿಸುತ್ತಿದ್ದಾರೆ.

ಇತ್ತೀಚೆಗೆ ಕ್ಷಯ ರೋಗಿಗಳ ಕುಟುಂಬದ ಸದಸ್ಯರು, ಕೆಲವು ನಾಗರಿಕ ಸೇವಾ ಗುಂಪುಗಳು, ರಾಜ್ಯ ಕ್ಷಯ ಅಧಿಕಾರಿಗಳು ಹಾಗೂ ಬಹು ಆಯಾಮದ ವಿಶ್ವ ಆರೋಗ್ಯ ಸಂಸ್ಥೆಯಂಥ ಸಂಸ್ಥೆಗಳು ಈ ಕುರಿತು ಮಾತನಾಡಿರುವ ಧ್ವನಿ ಮುದ್ರಿಕೆಗಳನ್ನು The Wire ಸುದ್ದಿ ಸಂಸ್ಥೆಯು ಪ್ರಕಟಿಸಿತ್ತು. ಕ್ಷಯ ರೋಗ ಔಷಧ ಕೊರತೆಯ ಕುರಿತು ಈ ಎಲ್ಲ ಸಂಬಂಧಿತ ವ್ಯಕ್ತಿಗಳು ಕಳವಳ ವ್ಯಕ್ತಪಡಿಸಿದ್ದರೂ, ಈ ವರದಿ ಪ್ರಕಟವಾದ ಎರಡು ದಿನಗಳ ನಂತರ ಭಾರತ ಸರ್ಕಾರವು ಇಂತಹ ಸಮಸ್ಯೆಯನ್ನು ತಳ್ಳಿ ಹಾಕಿತ್ತು.

ಕ್ಷಯ ರೋಗದ ಔಷಧ ಕೊರತೆಯ ಕಾರಣಕ್ಕೆ ಕೇಂದ್ರ ಆರೋಗ್ಯ ಸಚಿವರು ಕ್ಷಯ ರೋಗ ಕುರಿತ ವಿಶ್ವ ಸಂಸ್ಥೆಯ ಉನ್ನತ ಮಟ್ಟದ ಸಭೆಗೆ ಗೈರಾಗಿದ್ದರು. ಈ ಸಭೆಯು ಸೆಪ್ಟೆಂಬರ್ 22ರಂದು ನ್ಯೂಯಾರ್ಕ್ ನಲ್ಲಿ ಆಯೋಜನೆಗೊಂಡಿತ್ತು. ಈ ಸಭೆಗೆ ಕೀನ್ಯಾ, ಅಮೆರಿಕಾ, ಬ್ರಿಟನ್, ಝಾಂಬಿಯಾ, ಮಾಲವಿ, ಉಗಾಂಡಾ, ಕೆನಡಾ, ಘಾನಾ, ಕ್ಯಾಮೆರೂನ್, ಇಂಡೋನೇಶ್ಯಾ, ದಕ್ಷಿಣ ಆಫ್ರಿಕಾ, ಭಾರತ ಹಾಗೂ ಇನ್ನಿತರ ದೇಶಗಳ ಪ್ರತಿನಿಧಿ ಗುಂಪುಗಳು ಆಗಮಿಸಿದ್ದವು.

ಇಡೀ ವಿಶ್ವದಲ್ಲಿ ಭಾರತದ ಮೇಲೆಯೇ ಕ್ಷಯ ರೋಗದ ಅತಿ ಹೆಚ್ಚು ಹೊರೆಯಿದ್ದು, ರೋಗ ಮುಂದುವರಿಕೆ ಅಥವಾ ಭಾರತದಲ್ಲಿ ಈ ರೋಗಕ್ಕೆ ಚಿಕಿತ್ಸೆ ನೀಡುವುದರಲ್ಲಿ ಆಗುವ ಅಡಚಣೆಯು ಜಾಗತಿಕ ಕ್ಷಯ ನಿರ್ಮೂಲನೆಯ ಮೇಲೆ ನೇರ ಪರಿಣಾಮ ಬೀರಲಿದೆ. 2030ರ ವೇಳೆಗೆ ವಿಶ್ವಾದ್ಯಂತ ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಹೊಂದಿದ್ದರೆ, 2025ರ ವೇಳೆಗೆ ಭಾರತದಿಂದ ಕ್ಷಯವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News