×
Ad

ವಿದೇಶಾಂಗ ನೀತಿಯ ವೈಫಲ್ಯ

Update: 2025-06-17 06:29 IST

PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸ್ವಾತಂತ್ರ್ಯಾನಂತರ ಭಾರತ ಅನುಸರಿಸಿಕೊಂಡು ಬಂದ ವಿದೇಶಾಂಗ ನೀತಿ ಕಾಲ ಪರೀಕ್ಷೆಯಲ್ಲಿ ಉತ್ತೀರ್ಣವಾಗುತ್ತಲೇ ಬಂದಿದೆ. ಮೊದಲ ಪ್ರಧಾನ ಮಂತ್ರಿ ಪಂಡಿತ ಜವಾಹರಲಾಲ್ ನೆಹರೂ ಮತ್ತು ಅವರ ಸರಕಾರ ಅತ್ಯಂತ ಜತನದಿಂದ ರೂಪಿಸಿದ ವಿದೇಶಾಂಗ ನೀತಿ ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗೆ ಪೂರಕವಾಗಿದೆ.ಅಂತಲೇ ಭಾರತದ ನೇತೃತ್ವದಲ್ಲಿ ಅಲಿಪ್ತ ಆಂದೋಲನವೊಂದು ರೂಪುಗೊಂಡು ಅಂತರ್‌ರಾಷ್ಟ್ರೀಯವಾಗಿ ಅನೇಕ ಸಂದರ್ಭಗಳಲ್ಲಿ ಮಹತ್ವದ ಪಾತ್ರ ವಹಿಸುತ್ತ ಬಂದಿತು.ಆಂತರಿಕವಾಗಿಯೂ ಉಪಯುಕ್ತವಾದ ಪರಿಣಾಮ ಬೀರಿತು. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿಯವರಿಗೆ, ಅವರ ಸರಕಾರಕ್ಕೆ ಈ ವಿದೇಶಾಂಗ ನೀತಿ ಬೇಡವಾಗಿದೆ. ಇದರಿಂದ ಜಾಗತಿಕವಾಗಿ ಭಾರತದ ಪ್ರಾಮುಖ್ಯತೆ ಕಡಿಮೆಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಫೆಲೆಸ್ತೀನ್ ಜನತೆ ತಮ್ಮ ದೇಶವನ್ನೇ ಅಪಹರಣ ಮಾಡಿರುವ ಆಕ್ರಮಣಕೋರ ಇಸ್ರೇಲ್ ವಿರುದ್ಧ ಕಳೆದ ಐದಾರು ದಶಕಗಳಿಂದ ಹೋರಾಡುತ್ತಲೇ ಇದ್ದಾರೆ. ನ್ಯಾಯ ಸಮ್ಮತವಾದ ಈ ಹೋರಾಟಕ್ಕೆ ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳು ಬೆಂಬಲಿಸುತ್ತಾ ಬಂದಿವೆ. ಅಮೆರಿಕ ಮತ್ತು ಇಂಗ್ಲೆಂಡ್ ಬಿಟ್ಟರೆ ಉಳಿದೆಲ್ಲ ದೇಶಗಳ ಸಹಾನುಭೂತಿ ಫೆಲೆಸ್ತೀನ್‌ನ ನೊಂದ ಜನತೆಯ ಪರವಾಗಿ ವ್ಯಕ್ತವಾಗುತ್ತಲೇ ಇದೆ. ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಕೂಡ ಇಸ್ರೇಲ್‌ಗೆ ಸದಸ್ಯತ್ವ ಹಾಗೂ ಮಾನ್ಯತೆಯನ್ನು ನಿರಾಕರಿಸಲಾಗಿದೆ. ಹಲವಾರು ಸಂದರ್ಭದಲ್ಲಿ ನೆಹರೂ ಕಾಲದಿಂದಲೂ ಭಾರತ ಫೆಲೆಸ್ತೀನ್ ಪರವಾದ ನಿಲುವನ್ನು ತಾಳಿದೆ. ಇಸ್ರೇಲ್ ಜೊತೆಗೆ ರಾಜತಾಂತ್ರಿಕ ಸಂಬಂಧ ಕೂಡ ಸರಿಯಾಗಿಲ್ಲ. ಈಗ ಅಲ್ಲಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಫೆಲೆಸ್ತೀನ್ ಜನರು ನೆಲೆಸಿದ ಗಾಝಾ ಪ್ರದೇಶದಲ್ಲಿ ಕೆಲ ತಿಂಗಳುಗಳಿಂದ ಇಸ್ರೇಲ್ ಅವ್ಯಾಹತವಾಗಿ ಬಾಂಬ್ ದಾಳಿಯನ್ನು ನಡೆಸಿದೆ.ಇದರ ಪರಿಣಾಮವಾಗಿ 60 ಸಾವಿರಕ್ಕೂ ಹೆಚ್ಚು ಜನರು ಅಸು ನೀಗಿದ್ದಾರೆ. ಸಾವಿಗೀಡಾದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಹಾಗಾಗಿ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಖಂಡಿಸಿ ಕದನ ವಿರಾಮಕ್ಕಾಗಿ ಸಂಯುಕ್ತ ರಾಷ್ಟ್ರ ಸಂಸ್ಥೆ ನಿರ್ಣಯವೊಂದನ್ನು ಅಂಗೀಕರಿಸಿದೆ. ಈ ನಿರ್ಣಯದ ಕುರಿತ ಮತದಾನದ ಸಂದರ್ಭದಲ್ಲಿ ಗೈರು ಹಾಜರಾಗಿ ಉಳಿದ ಭಾರತ ಅಂದರೆ ಕೇಂದ್ರ ಸರಕಾರದ ವರ್ತನೆ ಜಾಗತಿಕವಾಗಿ ಅತ್ಯಂತ ಖಂಡನೆಗೆ ಗುರಿಯಾಗಿದೆ. ಇದು ನಾಚಿಕೆಗೇಡಿನ ಸಂಗತಿ. ಸ್ವಾತಂತ್ರ್ಯಾನಂತರ ಭಾರತ ಅನುಸರಿಸಿಕೊಂಡು ಬಂದ ವಿದೇಶಾಂಗ ನೀತಿಗೆ ಇದರಿಂದ ಅಪಚಾರ ಮಾಡಿದಂತಾಗಿದೆ. ಈ ನಿರ್ಣಯವನ್ನು ಮತಕ್ಕೆ ಹಾಕಿದಾಗ ಅದರ ಪರವಾಗಿ 149 ದೇಶಗಳು ಹಾಗೂ ನಿರ್ಣಯದ ವಿರೋಧವಾಗಿ 12 ದೇಶಗಳು ಸಹಿ ಹಾಕಿವೆ. ಮತದಾನದಿಂದ ಹೊರಗೆ ಉಳಿದ 19 ದೇಶಗಳಲ್ಲಿ ಭಾರತವೂ ಸೇರಿದೆ. ಮತದಾನದಿಂದ ಯಾಕೆ ದೂರ ಉಳಿಯಲಾಯಿತೆಂಬ ಬಗ್ಗೆ ಕೇಂದ್ರ ಸರಕಾರದಿಂದ ಉತ್ತರ ಬೇಕಾಗಿದೆ.

ಇಸ್ರೇಲ್ ಬಾಂಬ್ ದಾಳಿಯಿಂದಾಗಿ ನಿರಾಶ್ರಿತ ಮಹಿಳೆಯರು ಮತ್ತು ಮಕ್ಕಳು ಬಲಿಯಾಗಿದ್ದು ಮಾತ್ರವಲ್ಲದೆ, ಆಸ್ಪತ್ರೆಗಳು, ಶಾಲೆಗಳು, ನಿರಾಶ್ರಿತರ ವಸತಿ ಕೇಂದ್ರಗಳು ನಾಶವಾಗಿವೆ. ಅವಿರತವಾಗಿ ನಡೆದ ಬಾಂಬ್ ದಾಳಿ, ಜೊತೆಗೆ ಬದುಕಲು ಅವಶ್ಯಕವಾಗಿರುವ ಆಹಾರ, ಔಷಧಿ ಮತ್ತಿತರ ಸಾಮಗ್ರಿಗಳು ಕೂಡ ಲಭ್ಯವಾಗುತ್ತಿಲ್ಲ. ಈ ನೊಂದ ಜನರಿಗೆ ಸಹಾನುಭೂತಿಯಿಂದ ಕೆಲವು ದೇಶಗಳು ಕಳಿಸಿರುವ ಆಹಾರ ಸಾಮಗ್ರಿಗಳನ್ನು ಕೂಡ ಗಾಝಾ ಪ್ರದೇಶಕ್ಕೆ ಒದಗಿಸಲು ಇಸ್ರೇಲ್ ಬಿಡುತ್ತಿಲ್ಲ. ಗಾಝಾ ಪ್ರದೇಶಕ್ಕೆ ಆಹಾರ ಮತ್ತು ಔಷಧಿಗಳನ್ನು ಒದಗಿಸಲು ತೆರಳುತ್ತಿದ್ದ ಮೇಡ್ ಆಫ್ ದಿ ಫ್ರೀಡಂ ಹಡಗಿನ ಮೇಲೆ ಕೂಡ ಇಸ್ರೇಲ್ ದಾಳಿ ಮಾಡಿದೆ. ಸಂಯುಕ್ತ ರಾಷ್ಟ್ರ ಸಂಸ್ಥೆಯ, ಜಾಗತಿಕ ಸಮುದಾಯದ ಯಾವ ಮನವಿ, ಎಚ್ಚರಿಕೆಗಳಿಗೂ ಕೂಡ ಇಸ್ರೇಲ್ ಕಿವಿಗೊಡುತ್ತಿಲ್ಲ. ಇಂತಹ ದಾರುಣ ಸಂದರ್ಭದಲ್ಲಿ ಫೆಲೆಸ್ತೀನ್ ನ ನೊಂದ ಜನರ ಪರವಾಗಿರಬೇಕಿದ್ದ ಭಾರತ ಇಸ್ರೇಲನ್ನು ಓಲೈಸುವ ನೀತಿಗೆ ಶರಣಾಗಿರುವುದು ಸರಿಯಲ್ಲ.

ಯಾವುದೇ ಒಂದು ಸ್ವತಂತ್ರ ದೇಶ ಶಾಂತಿ ಮತ್ತು ನೆಮ್ಮದಿಯಿಂದ ಅಭಿವೃದ್ಧಿಯತ್ತ ಸಾಗಬೇಕಾದರೆ ಜಗತ್ತಿನ ಇತರ ದೇಶಗಳ ಜೊತೆಗೆ ಅದರಲ್ಲೂ ನೆರೆಹೊರೆಯ ದೇಶಗಳ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರಬೇಕು. ಆದರೆ ಕಳೆದ ಹತ್ತು ವರ್ಷಗಳಿಂದ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ನೆರೆಹೊರೆಯ ದೇಶಗಳ ಜೊತೆಗೆ ಸೌಹಾರ್ದ ಸಂಬಂಧವನ್ನು ಹೊಂದಿಲ್ಲ. ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಹಲವಾರು ತಟಸ್ಥ ದೇಶಗಳ ಮನವೊಲಿಸಿ ಅಲಿಪ್ತ ಆಂದೋಲನವನ್ನು ಕಟ್ಟಿದರು. ನೆಹರೂ ಜೊತೆಗೆ ಆಗ ಯುಗೊಸ್ಲಾವಿಯದ ಮಾರ್ಷಲ್ ಟಿಟೋ ಮತ್ತು ಈಜಿಪ್ಟಿನ ನಾಸೆರ್ ಕೈ ಜೋಡಿಸಿದ್ದರು. ಆನಂತರ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ದಕ್ಷಿಣ ಏಶ್ಯದ ಸಣ್ಣಪುಟ್ಟ ದೇಶಗಳ ಮನವೊಲಿಸಿ ಸಾರ್ಕ್ ಸಂಸ್ಥೆಗೆ ಚಾಲನೆ ನೀಡಿದರು. ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ನೆರೆಹೊರೆಯ ದೇಶಗಳ ಸಂಬಂಧ ಚೆನ್ನಾಗಿತ್ತು. ಈಗ ಜಾಗತಿಕವಾಗಿ ಮತ್ತು ಉಪಖಂಡದಲ್ಲಿ ಭಾರತ ಒಂಟಿಯಾಗಿದೆಯೇನೋ ಎಂಬ ಭಾವನೆ ಸಹಜವಾಗಿ ಬರುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಅವರ ಸೈದ್ಧಾಂತಿಕ ಗುರುಗಳಾದ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತರು ಆಗಾಗ ಭಾರತ ವಿಶ್ವಗುರುವಾಗುವ ಮಾತುಗಳನ್ನು ಆಡುತ್ತಿರುತ್ತಾರೆ. ಆದರೆ ಮೋದಿಯವರ ನೇತೃತ್ವದ ಸರಕಾರ ಅನುಸರಿಸುತ್ತಿರುವ ಆಂತರಿಕ ಮತ್ತು ವಿದೇಶಾಂಗ ನೀತಿ ದೇಶದ ಹಿತಾಸಕ್ತಿಗೆ ಮಾರಕವಾಗಿದೆ ಎಂಬುದು ಪ್ರತಿಪಕ್ಷಗಳ ಟೀಕೆ ಮಾತ್ರವಲ್ಲ, ವಾಸ್ತವ ಸಂಗತಿಯಾಗಿದೆ. ಸಂಯುಕ್ತ ರಾಷ್ಟ್ರ ಸಂಸ್ಥೆಯ ಭಯೋತ್ಪಾದನಾ ನಿಗ್ರಹ ಸಮಿತಿಯ ಉಪಾಧ್ಯಕ್ಷ ಸ್ಥಾನವನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಡ ಬೇಕಾಯಿತು. ಇದು ವಿದೇಶಾಂಗ ನೀತಿಯ ವೈಫಲ್ಯವಲ್ಲದೆ ಬೇರೇನೂ ಅಲ್ಲ. ಭಯೋತ್ಪಾದಕತೆಗೆ ಪ್ರಾಯೋಜಕತ್ವವನ್ನು ನೀಡುತ್ತ ಬಂದ ಪಾಕಿಸ್ತಾನ ಜಾಗತಿಕ ಸಮುದಾಯದಲ್ಲಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡಿದೆ. ಅದನ್ನು ತಡೆಯುವಲ್ಲಿ ಭಾರತ ವಿಫಲಗೊಂಡಿದೆ. ತಾಲಿಬಾನ್ ನಿರ್ಬಂಧ ಕುರಿತ ಸಂಯುಕ್ತ ರಾಷ್ಟ್ರ ಸಂಸ್ಥೆಯ ಸಮಿತಿಯ ಅಧ್ಯಕ್ಷ ಸ್ಥಾನ ಹಾಗೂ ಭಯೋತ್ಪಾದನಾ ನಿಗ್ರಹ ಸಮಿತಿಯ ಉಪಾಧ್ಯಕ್ಷ ಸ್ಥಾನವನ್ನು ಪಾಕಿಸ್ತಾನ ತನ್ನದಾಗಿಸಿಕೊಂಡಿದೆ. ಪ್ರಧಾನಿ ಮೋದಿಯವರು ಜಾಗತಿಕ ವಾಗಿ ತಮ್ಮ ಆಪ್ತ ಉದ್ಯಮಿ ಗೌತಮ್ ಅದಾನಿಯವರ ವ್ಯಾಪಾರ ಹಿತಾಸಕ್ತಿಯನ್ನು ಕಾಪಾಡಲು ತಮ್ಮ ಸ್ಥಾನಮಾನ ಹಾಗೂ ವರ್ಚಸ್ಸನ್ನು ಬಳಸಿಕೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಈವರೆಗೆ ಮಾಡಿದಷ್ಟು ವಿದೇಶ ಪ್ರವಾಸಗಳನ್ನು ಹಿಂದಿನ ಯಾವ ಪ್ರಧಾನಿಯೂ ಮಾಡಿಲ್ಲ. ವಿದೇಶಾಂಗ ಮಂತ್ರಿ ಹೋಗಬೇಕಾದ ದೇಶಗಳಿಗೂ ಇವರೇ ಹೋಗಿದ್ದಾರೆ. ಆದರೆ ಯಾವ ವಿದೇಶ ಪ್ರವಾಸವೂ ಪ್ರಯೋಜನಕಾರಿಯಾಗಿಲ್ಲ. ಹೀಗಾಗಿ ಉಪಖಂಡದಲ್ಲಿ ಮಾತ್ರವಲ್ಲ ಜಾಗತಿಕವಾಗಿಯೂ ಭಾರತ ದಿನದಿಂದ ದಿನಕ್ಕೆ ಒಂಟಿಯಾಗುತ್ತಿದೆ. ಇನ್ನು ಮುಂದಾದರೂ ಹಳಿ ತಪ್ಪಿದ ವಿದೇಶಾಂಗ ನೀತಿಯನ್ನು ಸರಿಪಡಿಸುವುದು ಅಗತ್ಯವಾಗಿದೆ. ವಿಶ್ವಗುರುವಾಗುವ ಹುಸಿ ಭ್ರಮೆಯನ್ನು ಕೈ ಬಿಟ್ಟು ವಿಶ್ವಮಿತ್ರನಾಗಲು ಭಾರತ ಮುಂದಾಗಬೆಕು.

ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗಲೂ ಫೆಲೆಸ್ತೀನ್ ಪರವಾಗಿರುವ ಹಾಗೂ ಸಾಮ್ರಾಜ್ಯಶಾಹಿ ವಿರೋಧಿ ವಿದೇಶಾಂಗ ನೀತಿಗೆ ಧಕ್ಕೆ ಯಾಗಿರಲಿಲ್ಲ. ವಾಜಪೇಯಿ ಅವರು ಬಹಿರಂಗವಾಗಿ ಇಸ್ರೇಲ್‌ನ ಜನಾಂಗವಾದಿ, ಆಕ್ರಮಣಕಾರಿ ನೀತಿಯನ್ನು ಖಂಡಿಸಿದ್ದರು. ಈಗ ಅವರದೇ ಪಕ್ಷದ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಅವರ ಸರಕಾರ ಇಸ್ರೇಲ್ ಪರವಾದ ನಿಲುವನ್ನು ತಾಳಿರುವುದು ಸರಿಯಲ್ಲ, ಈ ಧೋರಣೆಯ ಪರಿಣಾಮವಾಗಿ ಮುಂಬರುವ ದಿನಗಳಲ್ಲಿ ಭಾರತ ಭಾರೀ ಬೆಲೆ ತೆರಬೇಕಾಗಿ ಬಂದರೆ ಅಚ್ಚರಿ ಪಡಬೇಕಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News