ಬಾಲಾಪರಾಧಿಗಳ ಬದುಕಿನಲ್ಲಿ ಸುಧಾರಣೆಯಾಗಲಿ
PC: istockphoto
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಭಾರತದ 5.6 ಲಕ್ಷ ಕೈದಿಗಳಲ್ಲಿ ಸುಮಾರು ನಾಲ್ಕು ಲಕ್ಷ ಮಂದಿ ವಿಚಾರಣಾಧೀನ ಕೈದಿಗಳಾಗಿದ್ದಾರೆ. ಅಂದರೆ, ಮಾಡಿದ ಅಪರಾಧ ಸಾಬೀತಾಗದೆಯೇ ಭಾಗಶಃ ಶಿಕ್ಷೆ ಅನುಭವಿಸುತ್ತಿರುವ ಶೇ. 70ರಷ್ಟು ಕೈದಿಗಳು ಭಾರತದ ಜೈಲಿನಲ್ಲಿದ್ದಾರೆ ಎಂದು ವರದಿ ಹೇಳುತ್ತದೆ. ತಾವು ಮಾಡಿದ ಅಪರಾಧಗಳಿಗೆ ನಿಗದಿ ಪಡಿಸಿದ ಶಿಕ್ಷೆಗಿಂತ ಅಧಿಕ ಶಿಕ್ಷೆಯನ್ನು ವಿಚಾರಣೆಯ ಹೆಸರಿನಲ್ಲಿ ಇವರು ಜೈಲಿನಲ್ಲಿ ಅನುಭವಿಸುತ್ತಿದ್ದಾರೆ. ಶೇ. 25ರಷ್ಟು ಕೈದಿಗಳು ಜಾಮೀನಿಗೆ ಬೇಕಾದ ಹಣದ ಕೊರತೆಯಿಂದಾಗಿ ಜೈಲಿನಲ್ಲೇ ಉಳಿದಿದ್ದರೆ, ಶೇ. 60ಕ್ಕಿಂತ ಹೆಚ್ಚಿನ ಕೈದಿಗಳಿಗೆ ಉಚಿತ ಕಾನೂನು ನೆರವು ಪಡೆಯುವ ಹಕ್ಕಿನ ಅರಿವೇ ಇಲ್ಲ ಎನ್ನುತ್ತದೆ ವರದಿ. ವಿಚಾರಣಾ ಕೈದಿಗಳಲ್ಲಿ ದಲಿತರು ಮತ್ತು ಹಿಂದುಳಿದವರ್ಗದ ಜನರು ಶೇ. 66ರಷ್ಟಿದ್ದಾರೆ. ನಿಧಾನಗತಿಯ ನ್ಯಾಯಾಂಗ ವ್ಯವಸ್ಥೆಯೂ ವಿಚಾರಣಾಧೀನ ಕೈದಿಗಳ ಇಂದಿನ ಸ್ಥಿತಿಗೆ ಮುಖ್ಯ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಈ ದೇಶದಲ್ಲಿ 55 ಕೈದಿಗಳಿಗೆ ಒಬ್ಬ ಉಚಿತ ಕಾನೂನು ನೆರವು ವಕೀಲರು ಲಭ್ಯವಿದ್ದಾರೆ ಎಂದು ಅಂಕಿಅಂಶ ಹೇಳುತ್ತದೆ. ರಾಜಕೀಯ ದುರುದ್ದೇಶಗಳು ನ್ಯಾಯ ವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ನಡೆಸುವ ಹಸ್ತಕ್ಷೇಪಗಳೂ ಆರೋಪಿಗಳು ಅನ್ಯಾಯವಾಗಿ ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಬೇಕಾದ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿದೆ.
ಇದೇ ಸಂದರ್ಭದಲ್ಲಿ ನಿಧಾನಗತಿಯ ನ್ಯಾಯಾಂಗ ವ್ಯವಸ್ಥೆಯಿಂದಾಗಿ 362 ಬಾಲ ನ್ಯಾಯ ಮಂಡಳಿಗಳಲ್ಲಿ ಬಾಲಾಪರಾಧಕ್ಕೆ ಸಂಬಂಧಿಸಿದ 50,000ಕ್ಕೂ ಅಧಿಕ ಮಕ್ಕಳ ಪ್ರಕರಣಗಳು ವಿಚಾರಣೆಗೆ ಬಾಕಿಯಿದೆ ಎನ್ನುವ ಅಂಶವನ್ನು ನ್ಯೂ ಇಂಡಿಯಾ ಜಸ್ಟಿಸ್ ರಿಪೋರ್ಟ್ ಸಂಸ್ಥೆಯು ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ. ಬಾಲನ್ಯಾಯ ಕಾಯ್ದೆ ಜಾರಿಗೆ ಬಂದು ಹತ್ತು ವರ್ಷಗಳಾದರೂ ನ್ಯಾಯಾಧೀಶರ ಕೊರತೆ, ಬಾಲಸುಧಾರಣಾ ಗೃಹಗಳ ಅವ್ಯವಸ್ಥೆ, ದತ್ತಾಂಶಗಳ ಅಲಭ್ಯತೆ ನ್ಯಾಯದಾನಗಳ ಮೇಲೆ ತೀವ್ರ ಪರಿಣಾಮವನ್ನು ಬೀರಿವೆ ಎಂದು ವರದಿ ಆರೋಪಿಸುತ್ತಿದೆ. 2023ರ ಅಕ್ಟೋಬರ್ 31ರವರೆಗೆ, ಬಾಲನ್ಯಾಯ ಮಂಡಳಿಗಳ ಮುಂದಿರುವ 1,00,904 ಪ್ರಕರಣಗಳ ಪೈಕಿ ಶೇ. 55ರಷ್ಟು ವಿಚಾರಣೆಗೆ ಬಾಕಿಯುಳಿದಿದೆ. ಒಡಿಶಾದಲ್ಲಿ ಶೇ. 83ರಷ್ಟು ಬಾಕಿಯಿದ್ದರೆ ಕರ್ನಾಟಕದಲ್ಲಿ ಶೇ. 35 ಪ್ರಕರಣಗಳು ವಿಚಾರಣೆಗೆ ಬಾಕಿಯಿವೆ ಎಂದು ಅಂಕಿಅಂಶಗಳು ಹೇಳುತ್ತವೆ. ಭಾರತದ 765 ಜಿಲ್ಲೆಗಳ ಪೈಕಿ ಶೇ. 92ರಲ್ಲಿ ಬಾಲ ನ್ಯಾಯ ಮಂಡಳಿಗಳು ರಚನೆಯಾಗಿವೆ. ಆದರೆ ಪ್ರತೀ ನಾಲ್ಕು ಮಂಡಳಿಗಳ ಪೈಕಿ ಒಂದು ಪೂರ್ಣ ಪೀಠವನ್ನು ಹೊಂದಿಲ್ಲ. ಶೇ.30ರಷ್ಟು ಜೆಜೆಬಿಗಳು, ಕಾನೂನು ಸೇವಾ ಘಟಕವನ್ನು ಹೊಂದಿಲ್ಲ. 14 ರಾಜ್ಯಗಳು ಹಾಗೂ ಜಮ್ಮು-ಕಾಶ್ಮೀರದಲ್ಲಿನ ಬಾಲಸುಧಾರಣಾ ಗೃಹಗಳು ಸುರಕ್ಷತೆಯ ಕೊರತೆಯನ್ನು ಎದುರಿಸುತ್ತಿವೆ. ಹೆಣ್ಣು ಮಕ್ಕಳಿಗಾಗಿ ಕೇವಲ 40 ಪಾಲನಾ ಗೃಹಗಳಿವೆ ಎನ್ನುವ ಅಂಶವನ್ನು ವರದಿ ಉಲ್ಲೇಖಿಸಿದೆ.
ಈ ದೇಶದಲ್ಲಿ ಪ್ರತೀ ನಾಲ್ಕು ಗಂಟೆಗೆ ಒಬ್ಬನಂತೆ ಅಪ್ರಾಪ್ತ ವಯಸ್ಸಿನ ಅತ್ಯಾಚಾರಿಯನ್ನು ಬಂಧಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಂಕಿಅಂಶಗಳೇ ಹೇಳುತ್ತದೆ. ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ 5,906 ಬಾಲಾಪರಾಧಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅತಿ ಹೆಚ್ಚು ಬಾಲಾಪರಾಧಿಗಳ ಪ್ರಕರಣಗಳು ದಾಖಲಾಗಿರುವುದು ಬೆಂಗಳೂರಿನಲ್ಲಿ ಎಂದು ಸರಕಾರಿ ಅಂಕಿಅಂಶಗಳು ಹೇಳುತ್ತವೆ. 2022-23ರಲ್ಲಿ ರಾಜ್ಯದಲ್ಲಿ ಒಟ್ಟು 2,010 ಬಾಲಾಪರಾಧಿಗಳ ವಿರುದ್ಧ ಕೇಸ್ ದಾಖಲಾಗಿದ್ದರೆ, 2023-24ರಲ್ಲಿ 2, 132 ಹಾಗೂ 2024-25ರಲ್ಲಿ 1,764ರಷ್ಟು ಬಾಲಾಪರಾಧಿಗಳ ವಿರುದ್ಧ ಕೇಸ್ ದಾಖಲಾಗಿವೆ ಎಂದು ಸರಕಾರ ಹೇಳುತ್ತಿದೆ. ಮಕ್ಕಳ ವಿರುದ್ಧ ಪ್ರಕರಣ ದಾಖಲಾದ ಬೆನ್ನಿಗೇ ಅದರ ವಿಚಾರಣೆ ನಡೆಯುವುದು ಅತ್ಯಗತ್ಯ. ಯಾಕೆಂದರೆ ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮವಾದುದು. ಅಪರಾಧ ಪ್ರಕರಣಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಇವರು ಪ್ರಬುದ್ಧರಾಗಿರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ತಪ್ಪು ಕಾರಣಗಳಿಂದ ಇವರು ಅಪರಾಧ ಪ್ರಕರಣಗಳಲ್ಲಿ ಸಿಲುಕಿಕೊಳ್ಳಬಹುದು. ಇವರ ಮೇಲಿರುವ ಆರೋಪಗಳ ವಿಚಾರಣೆ ತಡವಾದಷ್ಟು ಇವರು ಬಾಲ ಸುಧಾರಣಾ ಗೃಹಗಳಲ್ಲಿ ಕಳೆಯಬೇಕಾಗುತ್ತದೆ. ಅಲ್ಲಿ ಬರುವ ಸಂಪರ್ಕಗಳು ಇವರನ್ನು ಪೂರ್ಣ ಪ್ರಮಾಣದಲ್ಲಿ ಅಪರಾಧಿಗಳನ್ನಾಗಿ ಪರಿವರ್ತಿಸಬಹುದು.
ಬಾಲಾಪರಾಧಿಗಳನ್ನು ಶಿಕ್ಷಿಸುವ ಬದಲಿಗೆ ಅವರಲ್ಲಿ ಸುಧಾರಣೆಗಳನ್ನು ತರುವ ಮಹತ್ ಉದ್ದೇಶವನ್ನು ಸುಧಾರಣಾ ಗೃಹಗಳು ಹೊಂದಿರುತ್ತವೆ. ಆದರೆ ವಿಚಾರಣೆಗಳು ತಡವಾದಷ್ಟು ಬಾಲಾಪರಾಧಿಗಳ ಮೇಲೆ ಇಂತಹ ಗೃಹಗಳಲ್ಲಿ ದೌರ್ಜನ್ಯಗಳು ನಡೆಯುತ್ತವೆ. ಸುಧಾರಣಾ ಗೃಹದ ಸಿಬ್ಬಂದಿಯಿಂದಲೇ ಈ ದೌರ್ಜನ್ಯಗಳು ಆರಂಭವಾಗುತ್ತವೆ. ಸಹ ಬಾಲಾಪರಾಧಿಗಳು ಉಳಿದ ಬಾಲಕರನ್ನು ಅಪರಾಧ ಜಗತ್ತಿಗೆ ತಳ್ಳುವ ಸಾಧ್ಯತೆಗಳಿರುತ್ತವೆ. ಬಾಲಾಪರಾಧಿ ಕೇಂದ್ರಗಳು ಆರೋಪಿಗಳನ್ನು ಸುಧಾರಣೆ ಮಾಡುವುದಕ್ಕಿಂತ, ಕ್ರಿಮಿನಲ್‌ಗಳಾಗಿ ಭಡ್ತಿ ಕೊಡುವುದೇ ಅಧಿಕ. ಈ ಕಾರಣದಿಂದಲೇ, ವಿಚಾರಣೆ ತಡವಾದಷ್ಟು ಬಾಲಾಪರಾಧಿಗಳ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದ ಸ್ಥಿತಿಯಾಗುತ್ತದೆ. ಸುಧಾರಣಾ ಕೇಂದ್ರಗಳು ಆರೋಪಿಗಳ ಬದುಕನ್ನು ಬದಲಾಯಿಸಲು ಪ್ರಯತ್ನಿಸಬೇಕು. ಅರ್ಧದಲ್ಲೇ ವಿದ್ಯಾಭ್ಯಾಸ ಮೊಟಕುಗೊಂಡವರಲ್ಲಿ ಓದಿನ ಆಸಕ್ತಿಯನ್ನು ಬೆಳೆಸಿ ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಸುಧಾರಣಾ ಗೃಹದಿಂದ ಹೊರಜಗತ್ತಿಗೆ ಕಾಲಿಟ್ಟಾಗ ಅವರು ಸಭ್ಯ ನಾಗರಿಕರಾಗಿ ಬದುಕುವುದಕ್ಕೆ ಬೇಕಾದ ಶಿಕ್ಷಣವನ್ನು ಈ ಸುಧಾರಣಾ ಕೇಂದ್ರಗಳು ನೀಡಬೇಕು. ಆದರೆ, ಬಾಲಾಪರಾಧಿಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ ಅವರನ್ನು ಸುಧಾರಣೆ ಮಾಡುವ ಸಿಬ್ಬಂದಿ ಪ್ರಯತ್ನಕ್ಕೆ ಹಿನ್ನಡೆಯಾಗುತ್ತದೆ. ಇಂದು ನಾಗರಿಕ ಸಮಾಜದಲ್ಲೇ ಬಡವರು, ದುರ್ಬಲ ಸಮುದಾಯದ ಜನರು ಶಿಕ್ಷಿತರಾಗುವುದಕ್ಕೆ ಇರುವ ಅವಕಾಶಗಳು ಕಿರಿದಾಗುತ್ತಿವೆ. ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿವೆ. ಹೀಗಿರುವಾಗ ಅಪರಾಧದ ಆರೋಪ ಹೊತ್ತ ಬಾಲಕರಿಗೆ ಉತ್ತಮ ಶಿಕ್ಷಣ ಸವಲತ್ತುಗಳನ್ನು ನೀಡಲು ನಮ್ಮ ವ್ಯವಸ್ಥೆ ಎಷ್ಟರಮಟ್ಟಿಗೆ ಯಶಸ್ವಿಯಾಗಬಹುದು? ಅದರೊಳಗಿರುವ ಮೂಲಭೂತ ಸೌಕರ್ಯಗಳ ಸ್ಥಿತಿ ಹೇಗಿರಬಹುದು?
ಸುಧಾರಣಾ ಗೃಹಗಳು ಕನಿಷ್ಠ ಬಾಲಕರನ್ನು ಸುಧಾರಣೆ ಮಾಡದೇ ಇದ್ದರೂ ಚಿಂತಿಲ್ಲ, ಅವರನ್ನು ಅಪರಾಧಿಗಳಾಗಿ ಪರಿವರ್ತಿಸದಂತೆ ನೋಡಿಕೊಳ್ಳಬೇಕು. ಇದೇ ಸಂದರ್ಭದಲ್ಲಿ ಸುಳ್ಳು ಆರೋಪಗಳಲ್ಲಿ ಬಂಧಿತರಾದ ಬಾಲಕರನ್ನು ಅತಿ ಶೀಘ್ರ ವಿಚಾರಣೆ ನಡೆಸಿ ಈ ಸುಧಾರಣಾ ಗೃಹದ ನರಕದಿಂದ ಅವರಿಗೆ ಮುಕ್ತಿ ಸಿಗುವಂತೆ ಮಾಡಬೇಕು. ದೊಡ್ಡವರು ಮಾಡುವ ತಪ್ಪುಗಳ ಕಾರಣದಿಂದಲೇ ಬಾಲಾಪರಾಧಿಗಳು ಹುಟ್ಟುತ್ತಾರೆ. ಆದುದರಿಂದ, ಈ ಬಾಲಾಪರಾಧಿಗಳ ಸೃಷ್ಟಿಗೆ ಕಾರಣವಾಗುವ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ನಡೆಯದೇ ಇದ್ದರೆ ದೇಶದಲ್ಲಿ ಇವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗಬಹುದು.