ಬ್ರಾಹ್ಮಣ ವಧು-ದಲಿತ ವರ: ಜಾತಿಯ ಶಾಪಕ್ಕೆ ಪರಿಹಾರವೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇತ್ತೀಚೆಗೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿರಿಯ ಐಎಎಸ್ ಅಧಿಕಾರಿ ಸಂತೋಷ್ ವರ್ಮಾ ಮಾತನಾಡುತ್ತಾ ‘‘ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ನೀಡುವವರೆಗೆ ಮೀಸಲಾತಿ ಮುಂದುವರಿಯಬೇಕು’’ ಎಂದು ಕರೆ ನೀಡಿದ್ದರು. ಈ ಐಎಎಸ್ ಅಧಿಕಾರಿ, ಮಧ್ಯ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ನೌಕರರ ಸಂಘದ ಅಧ್ಯಕ್ಷರೂ ಆಗಿದ್ದಾರೆ. ದಲಿತ ಯುವಕರು ವಧುವಿನ ಕೊರತೆ ಎದುರಿಸುತ್ತಿರುವ ಕಾರಣಕ್ಕಾಗಿಯೇನು ಅವರು ಈ ಮಾತುಗಳನ್ನು ಆಡಿರಲಿಲ್ಲ ಅಥವಾ ಅವರ ಮಾತಿನ ಉದ್ದೇಶ ಬ್ರಾಹ್ಮಣರ ಜೊತೆಗೆ ಮದುವೆ ಸಂಬಂಧ ಕುದುರಿಸುವುದೂ ಆಗಿರಲಿಲ್ಲ. ಈ ದೇಶದಲ್ಲಿ ಜಾತಿ ತಾರತಮ್ಯ ಎಷ್ಟು ವ್ಯಾಪಕವಾಗಿ ಹರಡಿದೆ ಎನ್ನುವುದನ್ನು ವಿವರಿಸಲು ಇದನ್ನು ಉದಾಹರಣೆಯಾಗಿ ಬಳಸಿಕೊಂಡಿದ್ದರು. ಇಷ್ಟಕ್ಕೂ ಈ ದೇಶದಲ್ಲಿ ಅಂತರ್ಜಾತಿಯ ಮದುವೆಗಳಿಗೆ ಕರೆ ನೀಡುವುದು ಇದೇ ಮೊದಲೇನೂ ಅಲ್ಲ. ಹಲವು ದಾರ್ಶನಿಕರು, ಚಿಂತಕರು, ಹೋರಾಟಗಾರರು ಸಮಾನತೆ ಸಾಧಿಸಲು ಅಂತರ್ಜಾತಿ ವಿವಾಹಗಳು ಹೆಚ್ಚಬೇಕು ಎಂದು ಕರೆ ನೀಡುತ್ತಾ ಬಂದಿದ್ದಾರೆ. ಸ್ವತಃ ಬ್ರಾಹ್ಮಣ ಸಮುದಾಯದೊಳಗೇ, ‘ವಧುವಿನ ಕೊರತೆ’ ಇರುವ ಕಾರಣಕ್ಕಾಗಿ ಬೇರೆ ಜಾತಿಗಳಿಂದ ಹೆಣ್ಣನ್ನು ಶುದ್ಧೀಕರಣಗೊಳಿಸಿ ತಮ್ಮ ಗಂಡು ಮಕ್ಕಳಿಗೆ ಮದುವೆ ಮಾಡಿಕೊಡುವ ವ್ಯವಸ್ಥೆಯಿದೆ. ಕೆಲವು ರಾಜ್ಯ ಸರಕಾರಗಳು ಅಂತರ್ಜಾತಿಯ ಮದುವೆಯಾದವರಿಗೆ ಸಹಾಯಧನಗಳನ್ನು ನೀಡುತ್ತಾ ಬಂದಿವೆ.
ಆದರೆ, ಈ ಐಎಎಸ್ ಅಧಿಕಾರಿ ವರ್ಮಾ ಅವರು ‘ಬ್ರಾಹ್ಮಣನೊಬ್ಬ ತನ್ನ ಮಗಳನ್ನು ದಲಿತನೊಬ್ಬನ ಮಗನಿಗೆ ಅಥವಾ ನನ್ನ ಮಗನಿಗೆ ನೀಡುವ ವಾತಾವರಣ ನಿರ್ಮಾಣ ಆಗಬೇಕು’ ಎಂದು ಕರೆ ನೀಡಿದಾಕ್ಷಣ ಅದು ತೀವ್ರ ವಿವಾದಕ್ಕೊಳಗಾಯಿತು. ಹೇಳಿಕೆ ನೀಡಿದ ಬೆನ್ನಿಗೇ ಬ್ರಾಹ್ಮಣ ಸಂಘಟನೆಗಳು ವರ್ಮಾ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದವು. ‘ಈ ಹೇಳಿಕೆ ಅಸಭ್ಯ, ಬ್ರಾಹ್ಮಣ ಹೆಣ್ಣು ಮಕ್ಕಳನ್ನು ಅವಮಾನಿಸುವ ಉದ್ದೇಶವನ್ನು ಹೊಂದಿದೆ. ಜಾತಿವಾದಿ ಹೇಳಿಕೆಯಿದು’ ಎಂದು ಆಕ್ರೋಶ ವ್ಯಕ್ತಪಡಿಸಿದವು. ಅಖಿಲ ಭಾರತ ಬ್ರಾಹ್ಮಣ ಸಮಾಜವು ಹೇಳಿಕೆಯ ವಿರುದ್ಧ ಪತ್ರಿಕಾಗೋಷ್ಠಿ ಕರೆದು ‘‘ಅಧಿಕಾರಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕು. ಇಲ್ಲವಾದಲ್ಲಿ ಬ್ರಾಹ್ಮಣ ಸಮಾಜ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಿದೆ’’ ಎಂದು ಎಚ್ಚರಿಸಿತು. ಇಷ್ಟಕ್ಕೂ ಐಎಎಸ್ ಅಧಿಕಾರಿ ಬ್ರಾಹ್ಮಣ ವಧುವನ್ನು ಬಲವಂತವಾಗಿ ದಲಿತ ಯುವಕರು ಮದುವೆಯಾಗಲು ಕರೆ ನೀಡಿರಲಿಲ್ಲ. ಬ್ರಾಹ್ಮಣ ಸಮುದಾಯ ದಲಿತ ಸಮುದಾಯದ ಜೊತೆಗೆ ಮದುವೆ ಸಂಬಂಧ ಕುದುರಿಸುವ ವಾತಾವರಣ ನಿರ್ಮಾಣವಾಗಿ ಹಿಂದೂ ಸಮಾಜದೊಳಗೆ ಸಮಾನತೆ ಸ್ಥಾಪನೆಯಾಗಬೇಕು ಎಂದು ತಮ್ಮ ಮಾತಿನಲ್ಲಿ ಬಯಸಿದ್ದರು. ಇದು ಮಹಾಪರಾಧವಾಗಿ ಮಧ್ಯ ಪ್ರದೇಶ ಸರಕಾರವೇ ಐಎಸ್‌ಎಸ್ ಅಧಿಕಾರಿಗೆ ನೋಟಿಸ್ ನೀಡಿದೆ. ಏಳು ದಿನಗಳ ಒಳಗೆ ಉತ್ತರ ನೀಡದೇ ಇದ್ದರೆ ಏಕಪಕ್ಷೀಯವಾಗಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದೆ.
ತಿಂಗಳ ಹಿಂದೆ ಉತ್ತರ ಪ್ರದೇಶದ ಲಕ್ನೊದಲ್ಲಿ ಬಿಜೆಪಿಯ ಮಾಜಿ ಶಾಸಕ ರಾಘವೇಂದ್ರ ಪ್ರತಾಪ ಸಿಂಗ್ ಎಂಬಾತ ‘‘ಮುಸ್ಲಿಮ್ ಹುಡುಗಿಯರನ್ನು ಬಲವಂತವಾಗಿ ಮದುವೆಯಾಗಲು’ ಹಿಂದೂ ಯುವಕರಿಗೆ ಕರೆ ನೀಡಿದ್ದರು. ‘‘ಮುಸ್ಲಿಮ್ ಹುಡುಗಿಯೊಂದಿಗೆ ಓಡಿ ಹೋಗಿ ವಿವಾಹವಾಗುವ ಯಾವುದೇ ಹಿಂದೂ ಯುವಕನ ಮದುವೆಯನ್ನು ನಾನೇ ನಿಂತು ಮಾಡಿಸುವೆ ಮಾತ್ರವಲ್ಲ, ಅವರಿಗೆ ಉದ್ಯೋಗದ ವ್ಯವಸ್ಥೆಯನ್ನೂ ಮಾಡುತ್ತೇನೆ’’ ಎಂದು ಭರವಸೆ ನೀಡಿದ್ದರು. ಕಳೆದ ಆಗಸ್ಟ್ ತಿಂಗಳಲ್ಲಿ ಕರ್ನಾಟಕದ ಕೊಪ್ಪಳದಲ್ಲಿ ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ್ ಅವರು ‘‘ಮುಸ್ಲಿಮ್ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ ಐದು ಲಕ್ಷ ರೂಪಾಯಿ ನೀಡುವೆ’’ ಎಂದು ಹೇಳಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆದರೆ ಇದರ ವಿರುದ್ಧ ಯಾವುದೇ ಸಂಘಟನೆಗಳು ಧ್ವನಿಯೆತ್ತಿರಲಿಲ್ಲ. ಇದೀಗ ಮಧ್ಯಪ್ರದೇಶದಲ್ಲಿ ಐಎಎಸ್ ಅಧಿಕಾರಿಯೊಬ್ಬರು ದಲಿತ ಯುವಕರು ಬ್ರಾಹ್ಮಣ ಯುವತಿಯರನ್ನು ಬಲವಂತವಾಗಿ ಮದುವೆಯಾಗಬೇಕು ಎಂಬ ಕರೆಯನ್ನೇನೂ ನೀಡಿರಲಿಲ್ಲ. ಹಿಂದೂ ಸಮಾಜದಲ್ಲಿ ಬ್ರಾಹ್ಮಣರು ದಲಿತರ ಜೊತೆಗೆ ವಿವಾಹ ಸಂಬಂಧವನ್ನು ಏರ್ಪಡಿಸಲು ಮುಂದಾದಾಗ ಜಾತೀಯತೆ ಅಳಿದು ಸಮಾನತೆ ನಿರ್ಮಾಣವಾಗುತ್ತದೆ. ಆಗ ಮೀಸಲಾತಿಯನ್ನು ರದ್ದುಗೊಳಿಸಬಹುದು ಎಂಬರ್ಥದಲ್ಲಿ ಅವರು ಕರೆ ನೀಡಿದ್ದರು. ಒಬ್ಬ ವಿದ್ಯಾವಂತ, ದಲಿತ ಐಎಎಸ್ ಅಧಿಕಾರಿಯ ಪುತ್ರನಿಗೆ ತಮ್ಮ ಮಗಳನ್ನು ಕೊಡುವುದು ಅವಮಾನಕಾರಿ ಸಂಗತಿ ಎಂದು ಬ್ರಾಹ್ಮಣ ಸಮುದಾಯದ ಮುಖಂಡರಿಗೆ ಯಾಕೆ ಅನ್ನಿಸಬೇಕು? ಹಾಗಾದರೆ ಬ್ರಾಹ್ಮಣರು ಹೆಣ್ಣಿನ ಕೊರತೆಯನ್ನು ಮುಂದಿಟ್ಟು ಇತರ ಜಾತಿಯ ಹೆಣ್ಣು ಮಕ್ಕಳನ್ನು ಶುದ್ಧೀಕರಿಸಿ ಮದುವೆಯಾಗುವುದು ಸರಿಯೆ? ಎನ್ನುವ ಪ್ರಶ್ನೆಯನ್ನು ಇದೀಗ ಇತರ ಜಾತಿಗಳ ಮುಖಂಡರು ಕೇಳುವಂತಾಗಿದೆ.
ಐಎಎಸ್ ಅಧಿಕಾರಿಯ ಮಾತಿನಲ್ಲಿ ಇನ್ನೊಂದು ಅಂಶವೂ ಅಡಗಿದೆ. ಮೀಸಲಾತಿಯಿಂದ ಆರ್ಥಿಕವಾಗಿ ಸಬಲರಾದರೂ ದಲಿತರು ಸಾಮಾಜಿಕವಾಗಿ ಅಸ್ಪಶ್ಯರಾಗಿಯೇ ಉಳಿಯಬೇಕಾಗುತ್ತದೆ ಎನ್ನುವ ವಾಸ್ತವವನ್ನು ಅವರು ಈ ಹೇಳಿಕೆಯ ಮೂಲಕ ತೆರೆದಿಟ್ಟಿದ್ದಾರೆ. ಒಬ್ಬ ಐಎಎಸ್ ಅಧಿಕಾರಿಯ ಮಗನಾದರೂ ಆತ ಹಿಂದೂ ಸಮಾಜದಲ್ಲಿ ಜಾತಿಯ ಕಳಂಕವನ್ನು ಹೊತ್ತುಕೊಂಡೇ ಬದುಕಬೇಕಾಗುತ್ತದೆ. ಆತ ಎಷ್ಟು ಉನ್ನತ ಸ್ಥಾನದಲ್ಲಿದ್ದರೂ ಮೇಲ್‌ಜಾತಿಯ ಜೊತೆಗೆ ವಿವಾಹ ಸಂಬಂಧವನ್ನು ಬೆಸೆಯಲು ಯೋಗ್ಯನಾಗುವುದಿಲ್ಲ ಎನ್ನುವುದನ್ನು ಬ್ರಾಹ್ಮಣ ಸಮಾಜವೇ ತಮ್ಮ ಖಂಡನಾ ಹೇಳಿಕೆಯ ಮೂಲಕ ಪುಷ್ಟೀಕರಿಸಿದೆ. ಮೀಸಲಾತಿಯ ಮೂಲಕ ಉನ್ನತ ಸ್ಥಾನವನ್ನು ಪಡೆದ ದಲಿತರಿಗೆ ಕೆನೆಪದರ ನೀತಿ ಅನ್ವಯವಾಗಬೇಕು ಎನ್ನುವ ಚರ್ಚೆ ಮುನ್ನೆಲೆಗೆ ಬಂದಿರುವ ಈ ಸಂದರ್ಭದಲ್ಲಿ, ಉನ್ನತ ಸ್ಥಾನವೂ ಕೆಲವೊಮ್ಮೆ ಅಸ್ಪಶ್ಯತೆಯನ್ನು ನಿವಾರಿಸಲಾರವು ಎನ್ನುವುದನ್ನು ಉದಾಹರಣೆಯ ಮೂಲಕ ಮುಂದಿಟ್ಟಿದ್ದಾರೆ. ಒಂದೆಡೆ, ಮೇಲ್‌ಜಾತಿಯ ಮಾಸಿಕ 60,000 ರೂ.ಗೂ ಅಧಿಕ ವರಮಾನವಿರುವ ಜನರನ್ನು ಬಡವರೆಂದು ಘೋಷಿಸಿ ಮೀಸಲಾತಿಯನ್ನು ಘೋಷಿಸಿರುವ ಸರಕಾರ, ಇನ್ನೊಂದೆಡೆ ಕೆನೆಪದರವನ್ನು ಮುಂದಿಟ್ಟು ಅವರಿಂದ ಮೀಸಲಾತಿಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ. ಜಾತೀಯತೆ ದಲಿತ ಸಮುದಾಯವನ್ನು ಎಷ್ಟೇ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ ಬೇತಾಳನಂತೆ ಬೆಂಬತ್ತುತ್ತಿವೆ ಎನ್ನುವುದಕ್ಕೆ ಉದಾಹರಣೆಯಾಗಿದೆ, ಜಾತೀಯತೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ದಲಿತ ಐಪಿಎಸ್ ಅಧಿಕಾರಿ ಪೂರನ್ ಕುಮಾರ್ ಪ್ರಕರಣ. ಈ ಕಾರಣಕ್ಕಾಗಿಯೇ ಐಎಎಸ್ ಅಧಿಕಾರಿ ವರ್ಮಾ ಅವರು ದಲಿತರು ಮತ್ತು ಮೇಲ್‌ಜಾತಿಯ ನಡುವೆ ಸಾಮಾಜಿಕವಾಗಿ ಸಂಬಂಧಗಳು ಏರ್ಪಡದೆ ಸಮಾನತೆಯನ್ನು ಸಾಧಿಸಲು ಸಾಧ್ಯವಿಲ್ಲ ಎಂದಿರುವುದು. ಆದರೆ ಅವರಿಗೆ ಸ್ವತಃ ಮಧ್ಯಪ್ರದೇಶ ಸರಕಾರವೇ ಶಿಸ್ತು ಕ್ರಮದ ನೋಟಿಸ್ ಜಾರಿ ಮಾಡುವ ಮೂಲಕ ‘ದಲಿತರು ಮತ್ತು ಬ್ರಾಹ್ಮಣರು’ ಎಂದಿಗೂ ಸಮಾನರಾಗಲು ಸಾಧ್ಯವಿಲ್ಲ ಎಂದು ಘೋಷಿಸಿದಂತಾಗಿದೆ.