ನವಜಾತ ಶಿಶುಗಳ ಸಾವುಗಳಿಗೆ ಕೊನೆ ಯಾವಾಗ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶಕ್ಕೆ ಸ್ವಾತಂತ್ರ್ಯ ಬಂದು ಏಳೂವರೆ ದಶಕಗಳು ಗತಿಸಿದವು. ಅಭಿವೃದ್ಧಿಯ ದಿಕ್ಕಿನಲ್ಲಿ ದೇಶ ದಾಪುಗಾಲಿಡುತ್ತಾ ಸಾಗಿದರೂ ಮಾನವಾಭಿವೃದ್ಧಿಯಲ್ಲಿ ನಿಜವಾದ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ ಎಂಬುದು ವಾಸ್ತವ ಸಂಗತಿ. ಉಳಿದುದೇನೇ ಇರಲಿ ಹೆಚ್ಚುತ್ತಿರುವ ನವಜಾತ ಶಿಶುಗಳ ಸಾವನ್ನು ತಡೆಯಲು ಈ ವರೆಗೆ ಸಾಧ್ಯವಾಗಿಲ್ಲ. ಈ ಸಾವುಗಳಿಗೆ ಏನು ಕಾರಣ ಎಂಬುದು ಸರಕಾರಕ್ಕೂ ಗೊತ್ತಿದೆ. ಹಾಗಾಗಿಯೇ ಕೆಲವು ಯೋಜನೆಗಳನ್ನು ರೂಪಿಸಿ ಇದನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ಆದರೂ ತಡೆಯಲು ಸಾಧ್ಯವಾಗಿಲ್ಲ ಎಂಬುದು ವಿಷಾದದ ಸಂಗತಿಯಾಗಿದೆ.
ನಮ್ಮ ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಕಳೆದ ಮೂರು ವರ್ಷಗಳಲ್ಲಿ 18,931 ನವಜಾತ ಶಿಶುಗಳು ಸಾವನ್ನಪ್ಪಿವೆ ಎಂಬುದು ಕಳವಳಕಾರಿ ಸಂಗತಿಯಾಗಿದೆ. ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯ ಅಂಕಿ ಅಂಶಗಳ ಪ್ರಕಾರ 2022-23ರಲ್ಲಿ 7,471 ಹಾಗೂ 2023-24ರಲ್ಲಿ 5,634 ಹಾಗೂ 2024-25ರಲ್ಲಿ 5,826 ಶಿಶುಗಳು ಅಸು ನೀಗಿವೆ. ಇದರಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 2,324 ಶಿಶುಗಳ ಸಾವು ದಾಖಲಾಗಿದೆ. ರಾಯಚೂರು, ಬಳ್ಳಾರಿ, ಬೆಳಗಾವಿ, ಮೈಸೂರು ಮುಂತಾದ ಜಿಲ್ಲೆಗಳು ನಂತರದ ಸ್ಥಾನದಲ್ಲಿ ಇವೆ.
ದೇಶದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಶಿಶು ಮರಣ ಪ್ರಮಾಣ ಕೊಂಚ ಕಡಿಮೆ. 1,000 ಜೀವಂತ ಜನನಗಳಿಗೆ 12ಕ್ಕೆ ಇಳಿಕೆಯಾಗಿದೆ. ಆದರೆ ಪಕ್ಕದ ಕೇರಳದಲ್ಲಿ ಇದರ ಪ್ರಮಾಣ 5 ಇದೆ. ಹಾಗಾಗಿ ಇದು ಇನ್ನಷ್ಟು ಕಡಿಮೆಯಾಗಬೇಕಾಗಿದೆ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಶಿಶು ಸಾವಿನ ಪ್ರಕರಣಗಳು ಜಾಸ್ತಿಯಾಗಿವೆ. ಹಾಗೆ ನೋಡಿದರೆ ಗ್ರಾಮೀಣ ಪ್ರದೇಶಗಳಲ್ಲಿ ಸರಕಾರದ ಆರೋಗ್ಯ ಸೇವೆ, ಆಸ್ಪತ್ರೆಗಳು ಕಡಿಮೆ. ನಗರ ಪ್ರದೇಶದಲ್ಲಿ ದಿನದ 24 ತಾಸುಗಳ ಕಾಲ ಕಾರ್ಯ ನಿರ್ವಹಿಸುವ ಆಸ್ಪತ್ರೆಗಳಿರುತ್ತವೆ. ಆದರೂ ನಗರ ಪ್ರದೇಶಗಳಲ್ಲಿ ನವಜಾತ ಶಿಶುಗಳ ಮರಣ ಹೆಚ್ಚಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ಶಿಶುಗಳ ಸಾವಿಗೆ ಹಲವಾರು ಕಾರಣಗಳಿವೆ. ಇದಕ್ಕೆ ಅವಧಿ ಪೂರ್ವ ಜನನ, ಉಸಿರುಗಟ್ಟುವಿಕೆ, ಕಡಿಮೆ ತೂಕ, ನ್ಯುಮೋನಿಯಾ ಹೀಗೆ ಹಲವಾರು ಕಾರಣಗಳನ್ನು ಕೊಡಬಹುದು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋಟ್ಯಂತರ ರೂಪಾಯಿ ಅನುದಾನವನ್ನು ನೀಡುತ್ತವೆ. ಹಲವಾರು ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನವಜಾತ ಶಿಶುಗಳ ಆರೋಗ್ಯ ಘಟಕಗಳು, ಸ್ಥಿರೀಕರಣ ಘಟಕಗಳು, ನವಜಾತ ಶಿಶುಗಳ ಶಿಶು ಆರೋಗ್ಯ ಕೇಂದ್ರಗಳು(ಎನ್.ಬಿ.ಸಿ) ಹಾಗೂ ಮದರ್ ಕೇರ್ ವಾರ್ಡುಗಳಂಥ ವಿಶೇಷ ಸೌಕರ್ಯಗಳನ್ನು ಒದಗಿಸಲಾಗಿದೆ. ಇವೆಲ್ಲ ಇದ್ದರೂ ಶಿಶು ಮರಣವನ್ನು ಸಂಪೂರ್ಣ ತೊಡೆದು ಹಾಕಲು ಸಾಧ್ಯವಾಗಿಲ್ಲ ಎಂಬುದು ಆತಂಕದ ಸಂಗತಿಯಾಗಿದೆ.
ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಪೌಷ್ಟಿಕಾಹಾರ ಕೊರತೆ, ಮಾತ್ರವಲ್ಲ ಬಾಣಂತಿಯರಿಗೆ ಮತ್ತು ಅವರ ಕುಟುಂಬದವರಿಗೆ ನವಜಾತ ಶಿಶುವಿನ ಆರೋಗ್ಯದ ಬಗ್ಗೆ ತಿಳುವಳಿಕೆಯ ಅಭಾವ ನವಜಾತ ಶಿಶು ಮರಣಕ್ಕೆ ಕಾರಣವಾಗಿದೆ. ಸೂಕ್ತ ವೈದ್ಯಕೀಯ ಮಾರ್ಗದರ್ಶನದ ಕೊರತೆ ಕೂಡ ಇದಕ್ಕೆ ಇನ್ನೊಂದು ಕಾರಣವಾಗಿದೆ. ಇಷ್ಟೆಲ್ಲಾ ಸೌಕರ್ಯಗಳನ್ನು ಒದಗಿಸಿದರೂ ಶಿಶು ಮರಣದ ಪ್ರಮಾಣವನ್ನು ಕಡಿಮೆ ಮಾಡಲು ಇಲ್ಲವೇ ನಿವಾರಿಸಲು ಯಾಕೆ ಸಾಧ್ಯವಾಗಿಲ್ಲ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಇಂದಿನ ಮಕ್ಕಳನ್ನು ನಾಳಿನ ನಾಗರಿಕರೆಂದು ಕರೆಯಲಾಗುತ್ತದೆ. ಆದರೆ ಆ ಮಕ್ಕಳ ಸರ್ವತೋಮುಖ ಏಳಿಗೆಗೆ ಸಮಗ್ರವಾದ ಯೋಜನೆಯನ್ನು ರೂಪಿಸಲು ಈವರೆಗೆ ಸಾಧ್ಯವಾಗಿಲ್ಲ. ದೇಶದಲ್ಲಿ ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಆರೋಪ, ಪ್ರತ್ಯಾರೋಪಗಳು ಕೇಳಿಬರುತ್ತವೆ. ಜಾತಿ, ಮತದ ಹೆಸರಿನಲ್ಲಿ ನಿತ್ಯ ಕೋಲಾಹಲಗಳು ನಡೆಯುತ್ತವೆ. ಆದರೆ ಶಿಶುಗಳ ಸಾವಿನ ಬಗ್ಗೆ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಈ ಬಗ್ಗೆ ಚರ್ಚೆಯಾಗುತ್ತಿಲ್ಲ. ಇದು ವಿಷಾದದ ಸಂಗತಿಯಾಗಿದೆ.ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಬಡ ಹಿಂದುಳಿದ ಕುಟುಂಬಗಳಿಗೆ ಸೇರಿದ ಮಹಿಳೆಯರು ಪೌಷ್ಟಿಕಾಂಶದ ಕೊರತೆಯಿಂದಾಗಿ ಅಸು ನೀಗಿದ ಉದಾಹರಣೆಗಳು ಸಾಕಷ್ಟು ಇವೆ. ನಮ್ಮ ರಾಜ್ಯದಲ್ಲಿ ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಹಿಳೆಯರು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವ ಸಂಗತಿ ಹೊಸದೇನಲ್ಲ.ಇದರ ಪರಿಣಾಮ ನವಜಾತ ಶಿಶುಗಳ ಮೇಲೂ ಆಗುತ್ತಿರುವುದರಿಂದ ಶಿಶು ಮರಣಗಳ ಪ್ರಮಾಣ ಜಾಸ್ತಿಯಾಗುತ್ತಿದೆ.
ಶಿಶು ಮರಣವನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾಟಾಚಾರದ ಯೋಜನೆಗಳನ್ನು ರೂಪಿಸಿದರೆ ಸಾಲದು. ಇಂಥ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಬಗೆಗೂ ಎಚ್ಚರ ವಹಿಸಬೇಕಾಗಿದೆ. ಇದರಲ್ಲಿ ಸಮಾಜದ ಪಾತ್ರವೂ ಮುಖ್ಯವಾಗಿದೆ.
ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಯಾವ್ಯಾವುದಕ್ಕೋ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತವೆ. ಬ್ಯಾಂಕುಗಳ ಸಾಲವನ್ನು ಕಟ್ಟಲಾಗದ ಕೋಟ್ಯಧೀಶ ಉದ್ಯಮ ಪತಿಗಳ ಸಾವಿರಾರು ಕೋಟಿ ರೂಪಾಯಿ ಮನ್ನಾ ಮಾಡಲಾಗುತ್ತದೆ. ಆದರೆ ಮಕ್ಕಳ, ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಅವಶ್ಯವಿರುವಷ್ಟು ಹಣವನ್ನು ಒದಗಿಸುವ ಬಗ್ಗೆ ಆಸಕ್ತಿಯನ್ನು ತೋರಿಸುತ್ತಿಲ್ಲ. ಇದು ವಿಷಾದದ ಸಂಗತಿಯಾಗಿದೆ.
ನಮ್ಮ ಜನ ಪ್ರತಿನಿಧಿಗಳು ಕೂಡ ಶಿಶು ಮರಣವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಆಸಕ್ತಿ ತೋರಿಸಬೇಕಾಗಿದೆ. ಈ ಬಗ್ಗೆ ಸಮಗ್ರ ಯೋಜನೆಯನ್ನು ರೂಪಿಸಲು ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ.ಸರಕಾರ ಮಾತ್ರವಲ್ಲ ಸಮಾಜ ಹಾಗೂ ಸ್ವಯಂ ಸೇವಾ ಸಂಸ್ಥೆಗಳು, ಮಠ, ಪೀಠಗಳು ಕೂಡ ವಿಶೇಷ ಆಸಕ್ತಿಯನ್ನು ವಹಿಸಿ ನವಜಾತ ಶಿಶುಗಳ ಸಾವಿನ ದುರಂತವನ್ನು ತಡೆಯಲು ಮುಂದಾಗಬೇಕಾಗಿದೆ.