×
Ad

ಹೆಚ್ಚುತ್ತಿರುವ ರಸ್ತೆ ಅಪಘಾತಗಳು

Update: 2025-11-27 08:11 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಲಬುರಗಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರು ಸೇರಿದಂತೆ ನಾಲ್ವರು ಅಸು ನೀಗಿದ್ದಾರೆ. ಈ ದುರಂತದ ತೀವ್ರತೆಯನ್ನು ಗಮನಿಸಿದರೆ ನಮ್ಮ ರಾಜ್ಯದ ಹಾಗೂ ದೇಶದ ರಸ್ತೆಗಳ ಸುರಕ್ಷತೆ ಬಗ್ಗೆ ಆತಂಕ ಉಂಟಾಗುತ್ತದೆ. ಈಗ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳೇನೋ ಸಾಕಷ್ಟು ಸುಧಾರಿಸಿವೆ. ಬೈಪಾಸ್ ರಸ್ತೆಗಳೂ ಬಂದಿವೆ. ಆದರೂ ಆಗಾಗ ಸಂಭವಿಸುತ್ತಲೇ ಇರುವ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಲೇ ಇಲ್ಲ. 2024ನೇ ವರ್ಷದಲ್ಲಿ ದೇಶದಲ್ಲಿ 4.73 ಲಕ್ಷ ಅಪಘಾತಗಳು ಸಂಭವಿಸಿವೆ. 1.70 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ. ಒಂದು ಅಧಿಕೃತ ಅಂದಾಜಿನ ಪ್ರಕಾರ ಪ್ರತಿದಿನ 465 ಜನ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಬಹುತೇಕ ಅಪಘಾತಗಳಲ್ಲಿ ವೇಗದ ಚಾಲನೆಯೇ ಸಾವಿಗೆ ಕಾರಣವಾಗಿದೆ. ಮಂಗಳವಾರ ಕಲಬುರಗಿ ಬಳಿ ಸಂಭವಿಸಿದ ಅಪಘಾತದಲ್ಲಿ ಕೂಡ ಚಾಲಕನ ವೇಗದ ಚಾಲನೆ ದುರಂತಕ್ಕೆ ಕಾರಣವೆನ್ನಲಾಗಿದೆ. ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯೂ ಇದರ ಜೊತೆಗೆ ಸೇರಿದೆ.

ಸರಕಾರ ಎಷ್ಟೇ ಎಚ್ಚರಿಕೆ ವಹಿಸಿದರೂ ದೇಶದಲ್ಲಿ ರಸ್ತೆ ಅಪಘಾತದಲ್ಲಿ ಅಸು ನೀಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಿ ನಿತಿನ್ ಗಡ್ಕರಿ ಅವರು ಈ ಹಿಂದೆ ಲೋಕಸಭೆಯಲ್ಲಿ ಒಪ್ಪಿಕೊಂಡಿದ್ದರು. ಸಚಿವರ ಈ ಹೇಳಿಕೆಯಲ್ಲಿ ಅತಿಶಯೋಕ್ತಿಯೇನೂ ಇಲ್ಲ. ಜಾಗತಿಕ ಚಾಲನಾ ಶಿಕ್ಷಣ ಸಂಸ್ಥೆಯೊಂದು ನಡೆಸಿದ ಅಧ್ಯಯನ ವರದಿಯ ಪ್ರಕಾರ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಅಪಾಯಕಾರಿ ರಸ್ತೆಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಅಧ್ಯಯನ ನಡೆಸಲಾದ ಐವತ್ತಾರು ದೇಶಗಳ ಪಟ್ಟಯ ಮೊದಲ ಮೂರು ಸ್ಥಾನಗಳಲ್ಲಿ ದಕ್ಷಿಣ ಆಫ್ರಿಕಾ, ಥಾಯ್ಲೆಂಡ್ ಮತ್ತು ಅಮೆರಿಕಗಳು ಸೇರಿವೆ. ಅತ್ಯಂತ ಹೆಚ್ಚು ಸುರಕ್ಷಿತ ರಸ್ತೆಗಳನ್ನು ಹೊಂದಿರುವ ಪಟ್ಟಿಯಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಜಪಾನ್ ಹಾಗೂ ಸ್ವೀಡನ್‌ಗಳು ಸೇರಿವೆ.

ಹೆಚ್ಚುತ್ತಲೇ ಇರುವ ರಸ್ತೆ ಅಪಘಾತಗಳಿಗೆ ಮೇಲ್ನೋಟಕ್ಕೆ ವೇಗದ ಚಾಲನೆ ಎಂದು ಕಂಡು ಬಂದರೂ ಇದಕ್ಕೆ ಇನ್ನೂ ಹಲವಾರು ಕಾರಣಗಳಿವೆ. ಸರಕಾರ ಹೊಸ ರಸ್ತೆಗಳನ್ನು ನಿರ್ಮಿಸಿದರೆ ಸಾಲದು ಅವುಗಳ ನಿರ್ವಹಣೆಯ ಕಡೆಗೂ ಗಮನವನ್ನು ಕೊಡಬೇಕು. ನಮ್ಮ ನಗರ, ಪಟ್ಟಣಗಳಲ್ಲಿ ಮಾತ್ರವಲ್ಲ ಹೆದ್ದಾರಿ ಗಳಲ್ಲಿ ಕೂಡ ಕಿತ್ತು ಹೋದ ಡಾಂಬರು, ಅವೈಜ್ಞಾನಿಕ ಜಾಮರ್‌ಗಳು, ಅಸುರಕ್ಷಿತ ತಿರುವುಗಳು ಹಾಗೂ ಪ್ರಾಣ ಘಾತುಕ ಗುಂಡಿಗಳು ಹೀಗೆ ಹಲವಾರು ಕಾರಣಗಳಿಂದ ಅಪಘಾತಗಳು ಸಂಭವಿಸುತ್ತಿವೆ. ನಮ್ಮ ದೇಶದ ಬಹುತೇಕ ರಸ್ತೆ ಅಪಘಾತಗಳಿಗೆ ಮೈ ಮೇಲೆ ಎಚ್ಚರವಿಲ್ಲದ ಬೇಕಾಬಿಟ್ಟಿ ವಾಹನ ಚಾಲನೆಯೇ ಮುಖ್ಯ ಕಾರಣವಾಗಿದೆ. ನಿತ್ಯವೂ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಪಾದಚಾರಿ ಮಾರ್ಗದ ಒತ್ತುವರಿಯಿಂದಾಗಿ ಏಕಾಏಕಿ ಮುಖ್ಯ ರಸ್ತೆಗೆ ನುಗ್ಗುವ ಪಾದಚಾರಿಗಳು ಕೂಡ ಅಪಘಾತಕ್ಕೆ ಕಾರಣರಾಗಿದ್ದಾರೆ. ಚಾಲಕರು ಸೀಟ್ ಬೆಲ್ಟ್ ಧರಿಸದಿರುವುದು ಕೂಡ ಅಪಘಾತಗಳ ಸಾವಿಗೆ ಕಾರಣ.

ರಸ್ತೆ ಅಪಘಾತಗಳಿಗೆ ಬಲಿಯಾಗುವವರ ಕುಟುಂಬಗಳು ಅನುಭವಿಸುವ ನರಕ ಯಾತನೆ, ದುಬಾರಿ ವೈದ್ಯಕೀಯ ಖರ್ಚು ವೆಚ್ಚಗಳನ್ನು ಗಮನಿಸಿದರೆ ಕಳವಳ ಉಂಟಾಗುತ್ತದೆ. ಅಪಘಾತಗಳಲ್ಲಿ ಸಾವಿಗೀಡಾಗುವವರು ಒಂದು ಕಡೆಯಾದರೆ, ಗಾಯಗೊಂಡು ಶಾಶ್ವತವಾಗಿ ಅಂಗ ವೈಕಲ್ಯಕ್ಕೊಳಗಾಗುವವರ ವ್ಯಥೆ ಇನ್ನೊಂದು ಕಡೆಗಿದೆ. ರಸ್ತೆ ಅಪಘಾತಗಳನ್ನು ತಡೆಯುವುದರಲ್ಲಿ ಸರಕಾರದ ಪಾತ್ರ ಎಷ್ಟಿದೆಯೋ, ಅದಕ್ಕಿಂತ ಜಾಸ್ತಿ ವಾಹನ ಚಾಲಕರ ಪಾತ್ರವೂ ಇದೆ. ಸರಕಾರ ರಸ್ತೆ ಸುರಕ್ಷಿತತೆಗೆ ಪೂರಕವಾದ ರಸ್ತೆಗಳನ್ನು ನಿರ್ಮಿಸುತ್ತದೆ, ಆದರೆ ಸಂಚಾರಿ ನಿಯಮಗಳ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲು ಆಗುತ್ತಿಲ್ಲ.

ರಸ್ತೆ ಅಪಘಾತಗಳಿಗೆ ಇನ್ನೊಂದು ಮುಖ್ಯ ಕಾರಣವೆಂದರೆ ಅಸುರಕ್ಷಿತ ರಸ್ತೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಹನಗಳು ಸಂಚರಿಸುವುದಾಗಿದೆ. ಬೆಂಗಳೂರು, ಮುಂಬೈಯಂಥ ಮಹಾನಗರಗಳಲ್ಲಿ ಮೂವರು ಸದಸ್ಯರನ್ನು ಹೊಂದಿರುವ ಹೆಚ್ಚಿನ ಕುಟುಂಬಗಳ ಬಳಿ ಮೂರು ಕಾರುಗಳು, ಮೂರು ದ್ವಿಚಕ್ರ ವಾಹನಗಳು ಇರುತ್ತವೆ. ಬಹುದೊಡ್ಡ ಐಷಾರಾಮಿ ವಾಹನಗಳಲ್ಲಿ ಒಬ್ಬರೇ ಓಡಾಡುತ್ತಿರುತ್ತಾರೆ.ಇದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುವುದಲ್ಲದೆ ರಸ್ತೆ ಅಪಘಾತಗಳೂ ಸಂಭವಿಸುತ್ತವೆ. ಸರಕಾರ ಆಟೊಮೊಬೈಲ್ ಉದ್ದಿಮೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ವಾಹನಗಳ ವಹಿವಾಟಿಗೆ ಅವಕಾಶ ನೀಡುತ್ತಾ ಬಂದಿದೆ. ಇನ್ನು ಮುಂದೆ ಇದಕ್ಕೆ ನಿಯಂತ್ರಣ ಇರಲೇಬೇಕು. ಇವುಗಳಿಗೆ ಪರ್ಯಾಯವಾಗಿ ಸಾರ್ವಜನಿಕ ಸಾರಿಗೆ ಸೌಕರ್ಯವನ್ನು ಬಲಪಡಿಸಬೇಕಾಗಿದೆ. ಆಗ ಮಾತ್ರ ಇಂಥ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಆಟೊಮೊಬೈಲ್ ಉದ್ದಿಮೆಗೆ ಕಡಿಮೆ ಆದ್ಯತೆ ನೀಡಿ ಜನರ ಬದುಕು ಮತ್ತು ಸುರಕ್ಷಿತೆಗೆ ವಿಶೇಷ ಆದ್ಯತೆ ನೀಡಬೇಕಾಗಿದೆ.

ವಿಪರೀತವಾಗಿರುವ ವಾಹನ ದಟ್ಟಣೆಯಿಂದಾಗಿ ಸಂಭವಿಸುವ ಅಪಘಾತಗಳು ಒಂದೆಡೆಯಾದರೆ, ಇನ್ನೊಂದೆಡೆ ಈ ವಾಹನಗಳಿಂದಾಗಿ ತೀವ್ರ ಸ್ವರೂಪದ ವಾಯು ಮಾಲಿನ್ಯ ಉಂಟಾಗುತ್ತಿದೆ. ಉಸಿರಾಡಲು ಶುದ್ಧ ಗಾಳಿಯೂ ವಿರಳವಾಗುತ್ತಿದೆ. ವಿಪರೀತ ವಾಯು ಮಾಲಿನ್ಯದಿಂದಾಗಿ ಜಗತ್ತಿನಲ್ಲಿ ಪ್ರತೀ ವರ್ಷ ಎಪ್ಪತ್ತು ಲಕ್ಷ ಮಂದಿ ಅಸು ನೀಗುತ್ತಿದ್ದಾರೆ. ಇದರಲ್ಲಿ ಆಫ್ರಿಕಾ ಹಾಗೂ ಏಶ್ಯದ ಜನರ ಸಂಖ್ಯೆ ಹೆಚ್ಚಿಗಿದೆ. ವಾಯು ಮಾಲಿನ್ಯದಿಂದಾಗಿ ಶ್ವಾಸಕೋಶ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿವೆ.

ನಮ್ಮ ದೇಶದ ರಾಜಧಾನಿ ದಿಲ್ಲಿಯಲ್ಲಿ ಉಸಿರಾಡುವ ಗಾಳಿಯೂ ಮಲಿನಗೊಂಡು ವಾಹನ ಸಂಚಾರದ ಮೇಲೆ ಒಂದಿಷ್ಟು ನಿಯಂತ್ರಣ ಹೇರಿದರೂ ಪ್ರಯೋಜನವಾಗುತ್ತಿಲ್ಲ. ಬೆಂಗಳೂರು ಕೂಡ ಇದಕ್ಕೆ ಹೊರತಲ್ಲ. ಬೆಂಗಳೂರು ದೇಶದ ಎರಡನೇ ಅತ್ಯಂತ ಕಲುಷಿತ ನಗರ ಎಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ ತಿಳಿಸಿದೆ.

ಸರಕಾರ ಪೊಲೀಸರ ಮೂಲಕ ದಂಡ ವಸೂಲಿ ಮಾಡುವುದಾಗಲಿ, ಬಾಕಿ ಉಳಿದ ದಂಡದ ವಸೂಲಿಯಲ್ಲಿ ರಿಯಾಯಿತಿ ನೀಡುವುದಾಗಲಿ ಪ್ರಯೋಜನಕಾರಿ ಅಲ್ಲ. ಅದರ ಬದಲಾಗಿ ರಸ್ತೆಯ ಸುರಕ್ಷಿತೆಗೆ ಮೊದಲ ಆದ್ಯತೆ ನೀಡಬೇಕಾಗಿದೆ.ಒಂದು ಕಾಲದಲ್ಲಿ ಉದ್ಯಾನ ನಗರಿ ಎಂದು ಹೆಸರು ಮಾಡಿದ್ದ ಬೆಂಗಳೂರು ಈಗ ರಸ್ತೆ ಗುಂಡಿಗಳ ನಗರವಾಗಿದೆ. ಆಗಾಗ ಅಪಘಾತಗಳು, ಸಾವುಗಳು ಸಂಭವಿಸುತ್ತಲೇ ಇವೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಮಹಾನಗರಗಳ ರಸ್ತೆಗಳನ್ನು ಸುಧಾರಿಸಿ ವಾಹನ ಮತ್ತು ಸಾರ್ವಜನಿಕ ಸಂಚಾರವನ್ನು ಸುಗಮಗೊಳಿಸುವುದು ಮೊದಲ ಆದ್ಯತೆಯಾಗಬೇಕು. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಕೂಡ ಸುರಕ್ಷಿತವಾಗಿರಲಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News