ಮತದಾರರ ಪಟ್ಟಿಯಲ್ಲಿ ಎಸ್‌ಐಆರ್ ರಕ್ತಪಾತ!
PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ಸಮಾಜದ ಮೇಲೆ ಬೀರುತ್ತಿರುವ ವಿವಿಧ ಒತ್ತಡಗಳು ಇದೀಗ ತೀವ್ರ ಸುದ್ದಿ ಮಾಡುತ್ತಿವೆ. ಕಳೆದ ಶನಿವಾರ ಗುಜರಾತ್‌ನ ವಡೋದರಾದ ಶಾಲೆಯೊಂದರಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಬೂತ್ ಮಟ್ಟದ ಅಧಿಕಾರಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಗುಜರಾತ್‌ನಲ್ಲಿ ನಾಲ್ಕು ದಿನಗಳಲ್ಲಿ ನಾಲ್ವರು ಬಿಎಲ್‌ಒ ಸಿಬ್ಬಂದಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಇತ್ತ ಪಶ್ಚಿಮ ಬಂಗಾಳದಲ್ಲಿ ಬೂತ್ ಮಟ್ಟದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಕೆಲಸದ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ಆತ್ಮಹತ್ಯೆ ಪತ್ರದಲ್ಲಿ ಚುನಾವಣಾ ಆಯೋಗವನ್ನು ದೂಷಿಸಿದ್ದಾರೆ. ಗುಜರಾತ್‌ನ ಗಿರ್‌ಜಿಲ್ಲೆಯಲ್ಲಿ ಶಿಕ್ಷಕ ಅರವಿಂದ ಮುಲ್ಜಿ ವಾಧೆರ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದು ‘‘ನಾನು ಇನ್ನು ಮುಂದೆ ಈ ಎಸ್‌ಐಆರ್ ಕೆಲಸ ಮಾಡಲು ಸಾಧ್ಯವಿಲ್ಲ. ಕಳೆದ ಕೆಲವು ದಿನಗಳಿಂದ ನಾನು ನಿರಂತರವಾಗಿ ದಣಿದಿದ್ದೇನೆ. ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದೇನೆ. ಆತ್ಮಹತ್ಯೆಯ ಹೊರತು ನನಗೆ ಬೇರೆ ದಾರಿಯಿಲ್ಲ’’ ಎಂದು ಅವರು ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ. ಅರವಿಂದ ಅವರು ಜಿಲ್ಲೆಯಲ್ಲಿ ಅತ್ಯುತ್ತಮ ಶಿಕ್ಷಕರೆಂದು ಗುರುತಿಸಲ್ಪಟ್ಟಿದ್ದರು. ಅವರ ಆತ್ಮಹತ್ಯೆಗೆ ಗುಜರಾತ್‌ನ ಶಿಕ್ಷಕ ವೃಂದ ಆಘಾತ ವ್ಯಕ್ತಪಡಿಸಿದೆ ಮಾತ್ರವಲ್ಲ, ಶಿಕ್ಷಕರ ಮೇಲೆ ಕೆಲಸದ ಒತ್ತಡಗಳನ್ನು ಹಾಕುವ ಸರಕಾರದ ಕ್ರಮವನ್ನು ಟೀಕಿಸಿದೆ. ಜೈಪುರದಲ್ಲಿ ಶಿಕ್ಷಕ ಮುಕೇಶ್ ಜಂಗಿದ್ ಎಂಬವರು ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಮೇಲಧಿಕಾರಿಯಿಂದ ಚುನಾವಣಾ ಕೆಲಸ ಮುಗಿಸಬೇಕು ಎನ್ನುವ ಒತ್ತಡ ಆತ್ಮಹತ್ಯೆಗೆ ಕಾರಣ’ ಎಂದು ಅವರು ಡೆತ್‌ನೋಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇವರ ಆತಂಕ ಒತ್ತಡಗಳಿಗೆ ಕಾರಣಗಳೂ ಇಲ್ಲದಿಲ್ಲ. ಬರೇ ಕೆಲಸದ ಒತ್ತಡ ಮಾತ್ರವಲ್ಲ, ಮೇಲಧಿಕಾರಿಗಳಿಂದ ಬೆದರಿಕೆಗಳನ್ನೂ ಅವರು ಎದುರಿಸುತ್ತಿದ್ದಾರೆ. ಕೊಟ್ಟ ಅವಧಿಯಲ್ಲಿ ಕೆಲಸ ಮಾಡದೇ ಇದ್ದುದಕ್ಕೆ ಮೇಲಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೆ ರಾಜಕೀಯ ಪಕ್ಷಗಳ ನಾಯಕರೂ ಇವರ ಮೇಲೆ ರಾಜಕೀಯ ಒತ್ತಡಗಳನ್ನು ಹೇರುತ್ತಿದ್ದಾರೆ. ತಮ್ಮ ಮೂಗಿನ ನೇರಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಒತ್ತಾಯಿಸುತ್ತಿದ್ದಾರೆ ಎನ್ನುವ ಆರೋಪಗಳಿವೆ. ಉತ್ತರ ಪ್ರದೇಶದ ನೊಯ್ಡಾ ಆಡಳಿತವು ಮೂರು ಪೊಲೀಸ್ ಠಾಣೆಗಳಲ್ಲಿ 60ಕ್ಕೂ ಹೆಚ್ಚು ಬೂತ್‌ಮಟ್ಟದ ಅಧಿಕಾರಿಗಳು ಮತ್ತು ಏಳು ಮೇಲ್ವಿಚಾರಕರ ಮೇಲೆ ಎಫ್‌ಐಆರ್ ದಾಖಲಿಸಿದೆ. ಬಹರಾಯಿಚ್‌ನಲ್ಲಿ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಹಲವು ಶಿಕ್ಷಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಚುನಾವಣಾ ಆಯೋಗವು ಮಾಡಿದ ಎಡವಟ್ಟುಗಳಿಗೆ ಈ ಅಮಾಯಕ ಸಿಬ್ಬಂದಿ ತಮ್ಮ ಜೀವವನ್ನು ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಬಿಎಲ್‌ಒ ಆಗಿ ಕೆಲಸ ಮಾಡುವ ಸಿಬ್ಬಂದಿಯ ಒತ್ತಡ ಒಂದು ವಿಧವಾದರೆ, ಇತ್ತ ಪಶ್ಚಿಮಬಂಗಾಳ ಸೇರಿದಂತೆ ಹಲವೆಡೆ ಮತದಾರರು ಮತದಾರರ ಪಟ್ಟಿಯಿಂದ ಹೊರಬೀಳುವ ಆತಂಕ ಎದುರಿಸುತ್ತಿರುವುದು ಮತ್ತು ಆ ಒತ್ತಡದಿಂದ ಆತ್ಮಹತ್ಯೆ ಮಾಡುತ್ತಿರುವ ಪ್ರಕರಣಗಳೂ ಬೆಳಕಿಗೆ ಬರುತ್ತಿವೆ. ಮತದಾರರ ಪಟ್ಟಿಯಿಂದ ಹೊರ ಬೀಳುವುದು ಎಂದರೆ, ಮತದಾನದ ಹಕ್ಕು ಕಳೆದುಕೊಳ್ಳುವುದು ಮಾತ್ರವಲ್ಲ. ಪರೋಕ್ಷವಾಗಿ ದೇಶದ ಪೌರತ್ವವನ್ನೇ ಕಳೆದುಕೊಳ್ಳುವುದು ಕೂಡ ಆಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಬೀಳದೆ ಇದ್ದರೆ ಅವರು ಹಂತ ಹಂತವಾಗಿ ಸರಕಾರದ ಇತರ ಸವಲತ್ತುಗಳನ್ನೂ ಕಳೆದುಕೊಳ್ಳಲಿದ್ದಾರೆ ಎನ್ನುವ ವದಂತಿಗಳು ವ್ಯಾಪಕವಾಗಿ ಹರಡುತ್ತಿವೆ. ಇದರಲ್ಲಿ ಸತ್ಯ ಇಲ್ಲದೇ ಇಲ್ಲ. ಎಸ್‌ಐಆರ್ ಎನ್ನುವುದು ಎನ್‌ಆರ್‌ಸಿಯ ಇನ್ನೊಂದು ರೂಪ ಎನ್ನುವ ಆರೋಪಗಳನ್ನು ಹಲವು ನಾಯಕರು ಮಾಡಿದ್ದಾರೆ. ಎನ್‌ಆರ್‌ಸಿಯನ್ನು ನೇರವಾಗಿ ಜಾರಿಗೆ ತರಲು ವಿಫಲವಾದ ಕೇಂದ್ರ ಸರಕಾರ ಚುನಾವಣಾ ಆಯೋಗದ ಮೂಲಕ ಮತ ಪರಿಷ್ಕರಣೆಯ ಹೆಸರಿನಲ್ಲಿ ಇದನ್ನು ಜಾರಿಗೊಳಿಸಲು ಮುಂದಾಗಿದೆ. ಸೂಕ್ತ ದಾಖಲೆಗಳನ್ನು ನೀಡಲು ವಿಫಲವಾದರೆ ಅವರು ಈ ದೇಶದ ಪೌರರಲ್ಲ ಎಂದು ಅವರನ್ನು ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ಹೊರಗಿಡಬಹುದಾಗಿದೆ ಅಥವಾ ಇರುವ ಹೆಸರುಗಳನ್ನು ಕಿತ್ತು ಹಾಕಬಹುದಾಗಿದೆ. ಬಿಹಾರದಲ್ಲಿ ಲಕ್ಷಾಂತರ ಮತದಾರರನ್ನು ವಿವಿಧ ನೆಪಗಳನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಕ್ರಿಯೆಯಿಂದ ಆಯೋಗವು ಹೊರಗಿಟ್ಟಿದೆ. ಎಲ್ಲಿ ನಾವು ಮತದಾರರ ಪಟ್ಟಿಯಿಂದ ಕಿತ್ತೆಸೆಯಲ್ಪಟ್ಟು ಜೈಲು ಸೇರಬೇಕಾಗಬಹುದೋ ಎಂಬ ಆತಂಕ, ಒತ್ತಡ ಬಡವರ್ಗವನ್ನು ಕಾಡುತ್ತಿದೆ. ಈ ಒತ್ತಡದಿಂದ ಈಗಾಗಲೇ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಎಸ್‌ಐಆರ್‌ನಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಸೇರಿದ ವ್ಯಕ್ತಿಗಳನ್ನು ಸಹಾಯಕರಾಗಿ ನೇಮಕ ಮಾಡುತ್ತಿರುವ ಆರೋಪಗಳೂ ಕೇಳಿ ಬರುತ್ತಿವೆ. ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯಲ್ಲಿ ರಾಜಕೀಯ ಪಕ್ಷವೊಂದರ ಜೊತೆಗೆ ನಿಕಟ ಸಂಬಂಧವಿರುವ ವ್ಯಕ್ತಿಗಳನ್ನು ಬೂತ್‌ಮಟ್ಟದ ಅಧಿಕಾರಿಯ ಸಹಾಯಕರಾಗಿ ತಪ್ಪಾಗಿ ಸೇರಿಸಲ್ಪಟ್ಟಿದೆ ಎಂದು ಜಿಲ್ಲಾಧಿಕಾರಿಯೇ ಒಪ್ಪಿಕೊಂಡಿದ್ದಾರೆ. ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಿದ ಬಳಿಕ ಜಿಲ್ಲಾಧಿಕಾರಿ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಇಂತಹ ಪ್ರಮಾದಗಳು ವ್ಯಾಪಕವಾಗಿ ನಡೆಯುತ್ತಿವೆ. ಆರೆಸ್ಸೆಸ್, ಬಿಜೆಪಿಯ ಜೊತೆಗೆ ಸಂಬಂಧವಿರುವ ಈ ಸಿಬ್ಬಂದಿ ಮತದಾರರ ಪಟ್ಟಿಯಲ್ಲಿ ನಡೆಸುವ ಹಸ್ತಕ್ಷೇಪ ಚುನಾವಣೆಯ ಮೇಲೆ ಎಷ್ಟು ಭೀಕರ ಪರಿಣಾಮ ಬೀರಬಹುದು ಎನ್ನುವುದು ಊಹಿಸುವುದು ಕಷ್ಟವಿಲ್ಲ. ಒಂದೆಡೆ ಕುಸಿದು ಬಿದ್ದು ಸಾವು, ಇನ್ನೊಂದೆಡೆ ಆತ್ಮಹತ್ಯೆ. ಆದರೆ ಈ ಆರೆಸ್ಸೆಸ್, ಬಿಜೆಪಿಯ ಜೊತೆಗೆ ಸಂಬಂಧವಿರುವ ಬಿಎಲ್‌ಒಗಳು ಚುನಾವಣಾ ವ್ಯವಸ್ಥೆಯನ್ನು ಕಗ್ಗೊಲೆಗೈಯುತ್ತಿದ್ದಾರೆ. ಗುಜರಾತ್ ಹತ್ಯಾಕಾಂಡದ ಬಳಿಕ ಎಸ್‌ಐಆರ್ ಮೂಲಕ ಸರಕಾರ ಹೊಸ ಬಗೆಯ ಹತ್ಯಾಕಾಂಡಕ್ಕೆ ಇಳಿದಿದೆ. ಮತದಾರರ ಪಟ್ಟಿಯಲ್ಲಿ ನಡೆಯುತ್ತಿರುವ ಈ ಮಹಾರಕ್ತಪಾತವನ್ನು ತಡೆಯುವುದಕ್ಕಾಗಿ ವಿಪಕ್ಷ ಮತ್ತೆ ಒಗ್ಗೂಡಿ ಹೋರಾಟ ನಡೆಸುವುದು ಅತ್ಯಗತ್ಯವಾಗಿದೆ.