×
Ad

ಸೌದಿ ವಿಶ್ವದ ತೃತೀಯ ಅತಿ ಸಂತುಷ್ಟ ರಾಷ್ಟ್ರ

Update: 2016-01-11 00:11 IST

 ಜಿದ್ದಾ,ಜ.10: ವಿಶ್ವದ ಅತ್ಯಂತ ಸಂತುಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಸೌದಿ ಅರೇಬಿಯವು ಮೂರನೆ ಸ್ಥಾನದಲ್ಲಿದೆ. ವಿನ್/ಗ್ಯಾಲಪ್ ಇಂಟರ್‌ನ್ಯಾಶನಲ್ ಪ್ರಕಟಿಸಿದ ವಿಶ್ವದ ಸಂತುಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಫಿಜಿ ಹಾಗೂ ಕೊಲಂಬಿಯಾ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದಿವೆ. ಆಶ್ಚರ್ಯವೆಂದರೆ, ಈ ಪಟ್ಟಿಯಲ್ಲಿ ಯುರೋಪ್‌ನ ಒಂದೇ ಒಂದು ದೇಶದ ಹೆಸರು ಸೇರ್ಪಡೆಗೊಂಡಿಲ್ಲ. 68 ದೇಶಗಳ 66,040 ವ್ಯಕ್ತಿಗಳನ್ನು ಸಂದರ್ಶಿಸಿ ಈ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಲಾಗಿದೆ.
 ವರ್ಷದುದ್ದಕ್ಕೂ 26 ಡಿಗ್ರಿ ಸೆಂಟಿಗ್ರೇಡ್ ಸರಾಸರಿ ತಾಪಮಾನ ಹೊಂದಿರುವ ಫಿಜಿ ದ್ವೀಪವು ಜಗತ್ತಿನಲ್ಲೇ ಅತ್ಯಂತ ಸಂತುಷ್ಟ ಪ್ರಜೆಗಳನ್ನು ಹೊಂದಿರುವ ದೇಶವಾಗಿದೆ. ಅದರ ಸಮೀಪದಲ್ಲೇ ಇರುವ ಮೆಕ್ಸಿಕೊ, ಜಗತ್ತಿನ ಎಂಟನೆ ಸಂತುಷ್ಟ ದೇಶವಾಗಿದೆ.
‘‘ಸಂತಸ’’ ಎಂದರೆ ಏನೆಂಬ ಬಗ್ಗೆ ಜನರ ಗ್ರಹಿಕೆಗಳು ವಿಭಿನ್ನವಾಗಿರುತ್ತವೆ. ವೈಯಕ್ತಿಕ ಸಂತೃಪ್ತಿಗೆ, ಭೌತಿಕ ಸಂಪತ್ತು,ವೈಚಾರಿಕ ಸ್ವಾತಂತ್ರ ಹಾಗೂ ಆಡಳಿತ ಸ್ಥಿರತೆಯು ಕಾರಣವಾಗಬೇಕೆಂದೇನೂ ಇಲ್ಲ ಎಂಬುದಾಗಿ ಸಮೀಕ್ಷೆಯಿಂದ ತಿಳಿದುಬಂದಿರುವುದಾಗಿ ವರದಿ ಹೇಳಿದೆ.
 ಚೀನಾ ಹಾಗೂ ಫಿಜಿ ಅತ್ಯಂತ ಆಶಾದಾಯಕ ದೇಶಗಳೆಂದು ಸಮೀಕ್ಷಾ ವರದಿ ತಿಳಿಸಿದೆ. ಆರ್ಥಿಕ ಪ್ರಗತಿಯಲ್ಲಿ ಚೀನಾ ಮೂರನೆ ಸ್ಥಾನ ಅಲಂಕರಿಸಿದೆ. ನೈಜೀರಿ ಯದ ಜನತೆ ತಮ್ಮ ಆರ್ಥಿಕತೆಯ ಬಗ್ಗೆ ಅತ್ಯಂತ ಆಶಾವಾದ ಹೊಂದಿದ್ದಾರೆ.
 
ವಿಶ್ವದ ಅತ್ಯಂತ ಆಶಾದಾಯಕ ರಾಷ್ಟ್ರಗಳ ಪಟ್ಟಿಯಲ್ಲಿಯೂ ಯುರೋಪ್‌ನ ಸಾಧನೆ ಕಳಪೆಯಾಗಿದೆ. ಐಸ್‌ಲ್ಯಾಂಡ್ ಹೊರತುಪಡಿಸಿ, ಯುರೋಪ್‌ನ ಇತರ ಯಾವುದೇ ರಾಷ್ಟ್ರಕ್ಕೂ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಶೇಕಡವಾರು ಸಂಖ್ಯೆಯಲ್ಲಿ ಮನೆಯಿಂದ ಹೊರಗೆ ಕೆಲಸ ಮಾಡುವ ಮಹಿಳೆಯರಿರುವ ದೇಶವಾದ ಐಸ್‌ಲ್ಯಾಂಡ್, ಚೀನಾದ ಜೊತೆ ಹತ್ತನೆ ಸ್ಥಾನವನ್ನು ಹಂಚಿಕೊಂಡಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ 68 ದೇಶಗಳ ಪೈಕಿ ಇಟಲಿಯು ಅತ್ಯಂತ ಕನಿಷ್ಠ ಸಂತುಷ್ಟ ದೇಶವಾಗಿದೆ. ಗ್ರೀಸ್ ಮೂರನೆ ಅತ್ಯಂತ ಅಸಂತುಷ್ಟ ರಾಷ್ಟ್ರವಾಗಿದೆ. ಫ್ರಾನ್ಸ್ ಹಾಗೂ ಇಟಲಿಗಳು ಅಸಂತುಷ್ಟ ದೇಶಗಳ ರ್ಯಾಂಕಿಂಗ್‌ನಲ್ಲಿ 10ನೇಸ್ಥಾನದಲ್ಲಿ ಪಾಲುಪಡೆದಿವೆ.
 2015ರಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದ್ದು, ಅದರಲ್ಲಿ ಪಾಲ್ಗೊಂಡವರ ಪೈಕಿ ಶೇ.66 ಮಂದಿ ತಾವು ಸಂತುಷ್ಟರೆಂದು ಹೇಳಿಕೊಂಡಿದ್ದಾರೆ. 2014ರ ಸಮೀಕ್ಷೆಯಲ್ಲಿ ಶೇ.70ರಷ್ಟು ಮಂದಿ ತಾವು ಸಂತುಷ್ಟರೆಂದು ತಿಳಿಸಿದ್ದರು. ಸಮೀಕ್ಷೆಯಲ್ಲಿ ಭಾಗವಹಿಸಿದ 66,040 ಮಂದಿ ತಾವು ಅಸಂತುಷ್ಟರೆಂದು ತಿಳಿಸಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ. 4ರಷ್ಟು ಅಧಿಕವಾಗಿದೆ. 2015ರಲ್ಲಿ ಕೊಲಂಬಿಯಾವು ಜಗತ್ತಿನ ನಿವ್ವಳ ಸಂತುಷ್ಟ (ಸಂತುಷ್ಟ-ಅಸಂತುಷ್ಟ) ದೇಶವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಇರಾಕ್, ಜಗತ್ತಿನ ಅತ್ಯಂತ ಅಸಂತುಷ್ಟ ರಾಷ್ಟ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News