×
Ad

ಒಬಾಮ ಅಳಲು ನೀರುಳ್ಳಿ ಬಳಸಿದ್ದರು: ಫಾಕ್ಸ್ ನ್ಯೂಸ್‌

Update: 2016-01-12 20:30 IST


ವಾಶಿಂಗ್ಟನ್, ಜ. 12: ಇತ್ತೀಚೆಗೆ ಕಠಿಣ ಬಂದೂಕು ಕಾನೂನುಗಳನ್ನು ಮಂಡಿಸುವ ವೇಳೆ ಭಾಷಣ ಮಾಡುತ್ತಿದ್ದಾಗ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರ ಕಣ್ಣುಗಳಿಂದ ನೀರು ಧಾರಾಕಾರವಾಗಿ ಹರಿದದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ, ಅದು ನಟನೆ ಮಾತ್ರ ಎಂಬುದಾಗಿ ‘ಫಾಕ್ಸ್ ನ್ಯೂಸ್’ನ ಚರ್ಚಾಪಟುವೊಬ್ಬರು ಆರೋಪಿಸಿದ್ದಾರೆ.

2012ರಲ್ಲಿ ಸ್ಯಾಂಡಿ ಹುಕ್ ಶಾಲೆಯಲ್ಲಿ ನಡೆದ ಗುಂಡು ಹಾರಾಟದ ಬಗ್ಗೆ ಮಾತನಾಡುವಾಗ ಅಮೆರಿಕದ ಅಧ್ಯಕ್ಷರು ಕಣ್ಣುಗಳನ್ನು ಒರೆಸುತ್ತಿದ್ದುದು ಕಂಡುಬಂತು. ಗುಂಡು ಹಾರಾಟ ಘಟನೆಯಲ್ಲಿ 20 ಮಕ್ಕಳು ಮೃತಪಟ್ಟಿದ್ದರು.ಆದರೆ, ಫಾಕ್ಸ್ ನ್ಯೂಸ್ ಚಾನೆಲ್‌ನಲ್ಲಿ ಒಬಾಮ ಭಾಷಣದ ಬಗ್ಗೆ ನಡೆದ ಚರ್ಚೆಯ ವೇಳೆ ಮಾತನಾಡಿದ ಆ್ಯಂಡ್ರಿಯಾ ಟ್ಯಾಂಟರಾಸ್, ಅವರ ಭಾವನೆಯ ಪ್ರದರ್ಶನವನ್ನು ನಂಬಲಾಗದು ಎಂದು ಹೇಳಿದರು.‘‘ಅವರ ವೇದಿಕೆಯಲ್ಲಿ ಹಸಿ ನೀರುಳ್ಳಿ ಇತ್ತೆ ಎಂದು ನಾನು ಪರೀಕ್ಷಿಸಬೇಕಾಗಿದೆ’’ ಎಂದರು.‘‘ನಾನು ಹೇಳುವುದು ಇಷ್ಟೆ. ಅವರ ಅಳುವನ್ನು ನಂಬಲು ಸಾಧ್ಯವಿಲ್ಲ. ಅದೂ ಅಲ್ಲದೆ, ಇದು ಪ್ರಶಸ್ತಿಗಳ ಋತು ಬೇರೆ’’ ಎಂದು ಅವರು ನುಡಿದರು.

ಇದೇ ವೇಳೆ ಮಾತನಾಡಿದ ಸಹ ನಿರೂಪಕಿ ಮೆಲಿಸಾ ಫ್ರಾನ್ಸಿಸ್, ಒಬಾಮರ ಭಾವಣೆಗಳ ಪ್ರದರ್ಶನವನ್ನು ‘‘ಕೆಟ್ಟ ರಾಜಕೀಯ ನಾಟಕ’’ ಎಂದು ಬಣ್ಣಿಸಿದರು. ‘‘ಕನೆಕ್ಟಿಕಟ್‌ನಲ್ಲಿ ಮೃತಪಟ್ಟ ಆ ಮಕ್ಕಳ ಬಗ್ಗೆ ನನಗೆ ಮರುಕವಿದೆ. ಆದರೆ, ಈ ವಿಷಯದ ಬಗ್ಗೆ ಮಾತ್ರ ಅವರು ಇಷ್ಟೊಂದು ಭಾವನಾತ್ಮಕವಾಗಿ ಮಾತನಾಡುತ್ತಾರೆ, ಭಯೋತ್ಪಾದನೆಯ ಬಗ್ಗೆ ಯಾವತ್ತೂ ಈ ರೀತಿ ಮಾತನಾಡಿಲ್ಲ’’ ಎಂದರು.

ಇಂಟರ್‌ನೆಟ್ ಮತ್ತು ಬಂದೂಕು ಪ್ರದರ್ಶನಗಳಲ್ಲಿ ಬಂದೂಕುಗಳ ಮಾರಾಟದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಮಾತನಾಡುತ್ತಿದ್ದಾಗ ಒಬಾಮ ಕಣ್ಣುಗಳಲ್ಲಿ ನೀರು ಹರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News