ಪಾಕ್ ವಿವಿಯಲ್ಲಿ ಭಯೋತ್ಪಾದಕರ ಅಟ್ಟಹಾಸ: ಕನಿಷ್ಠ 25 ಬಲಿ

Update: 2016-01-20 18:27 GMT

50ಕ್ಕೂ ಅಧಿಕ ಜನರಿಗೆ ಗಾಯ
 
ಪೇಷಾವರ,ಜ.20: ಪಾಕಿಸ್ತಾನದ ಅಶಾಂತ ಖೈಬರ್-ಪಖ್ತುಂಖ್ವಾ ಪ್ರಾಂತದ ಚರ್ಸಡ್ಡಾ ಜಿಲ್ಲೆಯ ಪ್ರತಿಷ್ಠಿತ ಬಚಾಖಾನ್ ವಿಶ್ವವಿದ್ಯಾನಿಲಯಕ್ಕೆ ಬುಧವಾರ ಬೆಳಗ್ಗೆ ನುಗ್ಗಿದ ಭಾರೀ ಶಸ್ತ್ರಸಜ್ಜಿತ ತಾಲಿಬಾನ್ ಉಗ್ರರು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಭೀಕರ ಗುಂಡಿನ ದಾಳಿಯನ್ನು ನಡೆಸಿದ್ದು, ಕನಿಷ್ಠ 25 ಜನರು ಕೊಲ್ಲಲ್ಪಟ್ಟಿದ್ದಾರೆ. ಇತರ 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಪೇಷಾವರದ ನೈಋತ್ಯಕ್ಕೆ ಸುಮಾರು 50 ಕಿ.ಮೀ.ದೂರದಲ್ಲಿರುವ ವಿವಿಗೆ ನುಗ್ಗಿದ ಉಗ್ರರು ತರಗತಿ ಕೋಣೆಗಳು ಮತ್ತು ಹಾಸ್ಟೆಲ್‌ಗಳಲ್ಲಿದ್ದವರ ಮೇಲೆ ಯದ್ವಾತದ್ವಾ ಗುಂಡುಗಳನ್ನು ಹಾರಿಸಿದರೆಂದು ಮಾಧ್ಯಮ ವರದಿಗಳು ತಿಳಿಸಿವೆ.


ವಿವಿ ಕ್ಯಾಂಪಸ್‌ನೊಳಗಿನಿಂದ ಭಾರೀ ಸ್ಫೋಟ ಮತ್ತು ಗುಂಡು ಹಾರಾಟದ ಶಬ್ದಗಳು ಕೇಳಿ ಬರುತ್ತಿದ್ದವು ಎಂದು ವರದಿಗಳು ತಿಳಿಸಿವೆ.


ಓರ್ವ ಪ್ರೊಫೆಸರ್ ಸೇರಿದಂತೆ 25 ಜನರು ಕೊಲ್ಲಲ್ಪಟ್ಟಿದ್ದು, ಇತರ 50 ಜನರು ಗಾಯಗೊಂಡಿದ್ದಾರೆಂದು ಪಾಕಿಸ್ತಾನ್ ತೆಹ್ರಿಕ್-ಎ-ಇನ್ಸಾಫ್ ಪಕ್ಷದ ನಾಯಕ ಹಾಗೂ ಪ್ರಾಂತೀಯ ಶಾಸಕ ಶೌಕತ್ ಯೂಸುಫ್‌ಝಾಯಿ ತಿಳಿಸಿದರು.


ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದಲ್ಲಿಯ ಎಲ್ಲ ಆಸ್ಪತ್ರೆಗಳಲ್ಲಿ ತುರ್ತು ಸ್ಥಿತಿಯನ್ನು ಘೋಷಿಸಲಾಗಿದೆ. ಪ್ರದೇಶದಲ್ಲಿಯ ಎಲ್ಲ ಶಾಲಾಕಾಲೇಜುಗಳನ್ನು ಮುಚ್ಚಲಾಗಿದೆ.
4ರಿಂದ 10 ಭಯೋತ್ಪಾದಕರು ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ ಯೂಸುಫ್‌ಜಾಯಿ, ಇಂತಹ ಹೇಡಿತನದ ದಾಳಿಯು ಭೀತಿವಾದದ ವಿರುದ್ಧ ಹೋರಾಡುವ ಸರಕಾರದ ನಿರ್ಧಾರವನ್ನು ದುರ್ಬಲಗೊಳಿಸದು ಎಂದರು.
ದಾಳಿಯ ಬೆನ್ನಲ್ಲೇ ಭಾರೀ ಸಂಖ್ಯೆಯಲ್ಲಿ ಸ್ಥಳಕ್ಕೆ ಧಾವಿಸಿದ ಭದ್ರತಾ ಪಡೆಗಳು ವಿದ್ಯಾರ್ಥಿಗಳನ್ನು ತೆರವುಗೊಳಿಸುವ ಕಾರ್ಯವನ್ನಾರಂಭಿಸಿದವು. ಪಾಕ್ ಸೇನಾ ಪಡೆಯ ಯೋಧರೂ ಪೇಷಾವರದಿಂದ ವಿವಿಗೆ ಧಾವಿಸಿ ಉಗ್ರರನ್ನು ದಮನಿಸಲು ಕಾರ್ಯಾಚರಣೆಯಲ್ಲಿ ತೊಡಗಿಕೊಂಡರು.
 
ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಕೊಲ್ಲಲಾಗಿದೆ. ವಿವಿಯ ಎಲ್ಲ ಕಟ್ಟಡಗಳು ಮತ್ತು ಛಾವಣಿಗಳು ಯೋಧರ ವಶದಲ್ಲಿವೆ ಎಂದು ಸೇನೆಯ ವಕ್ತಾರ ಲೆಜಆಸಿಂ ಸಲೀಂ ಬಾಜ್ವಾ ಟ್ವೀಟಿಸಿದ್ದಾರೆ. ತೆಹ್ರೀಕ್-ಎ-ತಾಲಿಬಾನ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ದಾಳಿಯ ವೇಳೆ ವಿವಿಯಲ್ಲಿ 3,000ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಕವಿ ಸಮ್ಮೇಳನವೊಂದಕ್ಕೆ ಆಹ್ವಾನಿತ 600 ಅತಿಥಿಗಳು ಉಪಸ್ಥಿತರಿದ್ದರು ಎಂದು ವಿವಿಯ ಕುಲಪತಿ ಡಾ.ಫಝಲ್ ರಹೀಂ ತಿಳಿಸಿದರು. 1988,ಜ.20ರಂದು ನಿಧನರಾಗಿರುವ ಖುದಾಯಿ ಖಿದ್ಮತ್‌ಗಾರ್ ಖಾನ್ ಅಬ್ದುಲ್ ಗಫಾರ್ ಖಾನ್ ಅಲಿಯಾಸ್ ಬಚಾ ಖಾನ್ ಅವರ ಪುಣ್ಯತಿಥಿಯ ಅಂಗವಾಗಿ ಈ ಸಮ್ಮೇಳನವನ್ನು ಏರ್ಪಡಿಸಲಾಗಿತ್ತು. ದಾಳಿಯಲ್ಲಿ ವಿವಿಯ ನಾಲ್ವರು ಭದ್ರತಾ ಸಿಬ್ಬಂದಿಮತ್ತು ಓರ್ವ ಪೊಲೀಸ್ ಕಾನ್‌ಸ್ಟೇಬಲ್ ಕೊಲ್ಲಲ್ಪಟ್ಟಿದ್ದಾರೆ ಎಂದು ರಹೀಂ ತಿಳಿಸಿದರು. ರಸಾಯನ ಶಾಸ್ತ್ರ ವಿಭಾಗದ ಪ್ರೊಫೆಸರ್ ಹಮೀದ್ ಹುಸೇನ್ ಭಯೋತ್ಪಾದಕರ ದಾಳಿಗೆ ಬಲಿಯಾದವರಲ್ಲಿ ಸೇರಿದ್ದಾರೆ. ಭಯೋತ್ಪಾದಕರು ಅವರ ಕೊಠಡಿಗೆ ನುಗ್ಗಿ ತಲೆಗೆ ಗುಂಡಿಕ್ಕಿ ಕೊಂದಿದ್ದಾರೆ ಎಂದು ಜಿಯೊ ಟಿವಿ ವರದಿ ಮಾಡಿದೆ.


ಭಯೋತ್ಪಾದಕರು ಗೋಡೆಗಳನ್ನು ಹತ್ತಿ ವಿವಿ ಆವರಣವನ್ನು ಪ್ರವೇಶಿಸಿದ್ದರೆಂದು ಖೈಬರ್-ಫಖ್ತುಂಖ್ವಾ ಶಾಸಕ ಅರ್ಷದ್ ಅಲಿ ತಿಳಿಸಿದರು.
ವಿವಿಯೊಳಗೆ ಸಿಕ್ಕಿ ಹಾಕಿಕೊಂಡಿರುವ ವಿದ್ಯಾರ್ಥಿಗಳ ಕುಟುಂಬಗಳು ಹೊರಗೆ ಸಾಲುಗಟ್ಟಿ ನಿಂತುಕೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು 20ಕ್ಕೂ ಅಧಿಕ ಆ್ಯಂಬುಲನ್ಸ್‌ಗಳನ್ನು ಬಳಸಿಕೊಳ್ಳಲಾಗಿತ್ತು.


ಭಯೋತ್ಪಾದಕರು 18ರಿಂದ 25ವರ್ಷ ವಯೋಮಾನದವರು ಎನ್ನಲಾಗಿದೆ.


ಹೊಣೆಹೊತ್ತ ತಾಲಿಬಾನ್?: ಉಗ್ರರ ನೆಲೆಗಳ ಮೇಲೆ ಮಿಲಿಟರಿ ಕಾರ್ಯಾಚರಣೆಗೆ ಪ್ರತೀಕಾರವಾಗಿ ಇಂದಿನ ದಾಳಿಯನ್ನು ನಡೆಸಲಾಗಿದ್ದು, ನಾಲ್ವರು ಆತ್ಮಹತ್ಯಾ ದಾಳಿಕೋರರು ಭಾಗಿಯಾಗಿದ್ದರು ಎಂದು ಹಿರಿಯ ತಾಲಿಬಾನ್ ಕಮಾಂಡರ್ ಉಮರ್ ಮನ್ಸೂರ್ ಮಾಧ್ಯಮಗಳಿಗೆ ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News