ಭಾರತೀಯರು ಸ್ವಾರ್ಥಿಗಳು ಚೀನಾದ ಸರಕಾರಿ ಪತ್ರಿಕೆಯ ಸಂಪಾದಕೀಯ

Update: 2016-06-28 11:49 GMT

ಬೀಜಿಂಗ್, ಜೂ. 28: ಭಾರತೀಯರು ಸ್ವಾರ್ಥಿಗಳು, ತಾವೇ ಶ್ರೇಷ್ಠರೆಂದು ಭಾವಿಸಿಕೊಳ್ಳುವವರು ಮತ್ತು ಬಹುಶಃ ನೈತಿಕತೆಯ ಕೊರತೆಯನ್ನೂ ಉಳ್ಳವರು ಎಂಬುದಾಗಿ ಚೀನಾದ ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ತನ್ನ ಸಂಪಾದಕೀಯದಲ್ಲಿ ಬಣ್ಣಿಸಿದೆ.
ಭಾರತ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್)ಯ ಸದಸ್ಯತ್ವವನ್ನು ಔಪಚಾರಿಕವಾಗಿ ಪಡೆದ ಒಂದು ದಿನದ ಬಳಿಕ ಪತ್ರಿಕೆ ತನ್ನ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಚೀನಾಕ್ಕೆ ಈವರೆಗೆ ಎಂಟಿಸಿಆರ್ ಸದಸ್ಯತ್ವ ಸಿಕ್ಕಿಲ್ಲ.
ಇಡೀ ಸಂಪಾದಕೀಯದ ಉದ್ದಕ್ಕೂ ಭಾರತೀಯರನ್ನು ಅಪಹಾಸ್ಯಗೈಯಲಾಗಿದೆ. ಭಾರತೀಯರಿಗೆ ರಾಷ್ಟ್ರೀಯತೆ ಎಂದರೆ ಏನೆಂದು ಗೊತ್ತಿಲ್ಲ, ಅವರಿಗೆ ನೈತಿಕತೆಯ ಗಂಧಗಾಳಿಯಿಲ್ಲ ಹಾಗೂ ಪಶ್ಚಿಮದ ಅಂಧಾನುಕರಣೆ ಮಾಡುತ್ತಾರೆ ಹಾಗೂ ಹಾಳಾಗಿದ್ದಾರೆ ಎಂದು ಪತ್ರಿಕೆ ಹೇಳುತ್ತದೆ.
ಪರಮಾಣು ಪೂರೈಕೆದಾರರ ಗುಂಪಿ (ಎನ್‌ಎಸ್‌ಜಿ)ಗೆ ಸೇರ್ಪಡೆಗೊಳ್ಳುವ ಭಾರತದ ಪ್ರಯತ್ನ ವಿಫಲಗೊಂಡಿರುವುದರ ಕುರಿತ ವರದಿಗಾರಿಕೆಯ ಬಗ್ಗೆಯೂ ಸಂಪಾದಕೀಯ ಹೀಗೆ ಹೇಳುತ್ತದೆ.
ಎನ್‌ಎಸ್‌ಜಿ ಪ್ರವೇಶ ಪಡೆಯುವಲ್ಲಿನ ಭಾರತದ ವೈಫಲ್ಯಕ್ಕೆ ಭಾರತೀಯ ಮಾಧ್ಯಮಗಳು ಮತ್ತು ಸರಕಾರಗಳು ಚೀನಾವನ್ನು ದೂಷಿಸಿರುವುದನ್ನು ಸ್ಮರಿಸಬಹುದಾಗಿದೆ.
ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ವಿಷಯದಲ್ಲಿ ಚೀನಾದ ಪತ್ರಿಕೆಯ ಸಂಪಾದಕೀಯ ಭಾರತೀಯರಿಗೆ ಪಾಠ ಮಾಡುವಂತಿದೆ.
ಭಾರತೀಯರು ನಡೆಸುತ್ತಿರುವ ‘‘ಪಶ್ಚಿಮದ ತುಷ್ಟೀಕರಣ’’ವನ್ನು ಪತ್ರಿಕೆ ಟೀಕಿಸಿದೆ. ಅಮೆರಿಕ, ಫ್ರಾನ್ಸ್, ಕೆನಡ ಹಾಗೂ ಇತರ ಹಲವಾರು ದೇಶಗಳು ಎನ್‌ಎಸ್‌ಜಿ ಸದಸ್ಯತ್ವಕ್ಕಾಗಿನ ಭಾರತದ ಪ್ರಯತ್ನಗಳಿಗೆ ಬೆಂಬಲ ನೀಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News