ಬ್ರಸೆಲ್ಸ್ ಅಪರಾಧ ಪ್ರಯೋಗಾಲಯದಲ್ಲಿ ಸ್ಫೋಟ; ಐವರ ಬಂಧನ

Update: 2016-08-29 18:31 GMT

ಬ್ರಸೆಲ್ಸ್ (ಬೆಲ್ಜಿಯಂ), ಆ. 29: ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ನಲ್ಲಿರುವ ದೇಶದ ರಾಷ್ಟ್ರೀಯ ಅಪರಾಧ ಪ್ರಯೋಗಾಲಯದಲ್ಲಿ ಸೋಮವಾರ ಸ್ಫೋಟವೊಂದು ಸಂಭವಿಸಿದೆ. ಸಾವು-ನೋವು ಉಂಟಾಗದಿದ್ದರೂ, ಪ್ರಯೋಗಾಲಯಕ್ಕೆ ಭಾರೀ ಹಾನಿ ಸಂಭವಿಸಿದೆ ಎಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಬೆಲ್ಜಿಯಂ ಪೊಲೀಸರು ಐವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಸ್ಫೋಟವನ್ನು ಭಯೋತ್ಪಾದಕರು ನಡೆಸಿದ್ದಾರೆಂದು ನಂಬಲು ತಕ್ಷಣಕ್ಕೆ ಕಾರಣವಿಲ್ಲ ಎಂದು ಅವರು ಹೇಳಿದ್ದಾರೆ. ಇದು ಪುರಾವೆಗಳನ್ನು ನಾಶಗೊಳಿಸಲು ಕ್ರಿಮಿನಲ್‌ಗಳು ನಡೆಸಿರುವ ಪ್ರಯತ್ನವಾಗಿರುವ ಸಾಧ್ಯತೆಯೂ ಇದೆ.

ಮಾರ್ಚ್‌ನಲ್ಲಿ ನಡೆದ ಐಸಿಸ್ ಪ್ರೇರಿತ ಬಾಂಬ್ ದಾಳಿಗಳ ಬಳಿಕ ಬೆಲ್ಜಿಯಂ ಈಗಲೂ ಕಟ್ಟೆಚ್ಚರದಲ್ಲಿದೆ.

‘‘ನಗರದಿಂದ ಐವರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಘಟನೆಯಲ್ಲಿ ಅವರು ಯಾವುದೇ ಪಾತ್ರ ಹೊಂದಿದ್ದಾರೆಯೇ ಎಂಬುದನ್ನು ತಿಳಿಯಲು ಅವರನ್ನು ಈಗ ಪ್ರಶ್ನಿಸಲಾಗುತ್ತಿದೆ’’ ಎಂದು ಬ್ರಸೆಲ್ಸ್ ಪ್ರಾಸಿಕ್ಯೂಟರ್ ಕಚೇರಿಯ ವಕ್ತಾರೆಯೊಬ್ಬರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬ್ರಸೆಲ್ಸ್‌ನ ಉತ್ತರದಲ್ಲಿರುವ ನ್ಯಾಶನಲ್ ಕ್ರಿಮಿನಾಲಜಿ ಇನ್‌ಸ್ಟಿಟ್ಯೂಟ್‌ನಲ್ಲಿ ಸೋಮವಾರ ಮುಂಜಾನೆ ಸ್ಫೋಟ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News