ಭಾರತದ ಹೊಸ 500, 2000 ರೂ. ನೋಟುಗಳನ್ನು ನಿಷೇಧಿಸಿದ ನೇಪಾಳ

Update: 2016-11-24 18:20 GMT

ಕಾಠ್ಮಂಡು, ನ.24: ಭಾರತ ಸರಕಾರ ಚಲಾವಣೆಗೆ ತಂದಿರುವ 2000 ರೂ. ಮತ್ತು 500 ರೂ. ಹೊಸ ನೋಟುಗಳು ಅನಧಿಕೃತ ಮತ್ತು ಅಕ್ರಮ ಎಂದು ಹೇಳಿರುವ ನೇಪಾಳ ರಾಷ್ಟ್ರ ಬ್ಯಾಂಕ್, ಈ ನೋಟುಗಳ ಬಳಕೆಯನ್ನು ನಿಷೇಧಿಸಿದೆ.

1000 ಮತ್ತು 500 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಭಾರತ ಸರಕಾರ ಹೊಸದಾಗಿ 2000 ರೂ. ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತ್ತು. ಆದರೆ ಈ ನೋಟುಗಳು ಅನಧಿಕೃತ ಮತ್ತು ಅಕ್ರಮ ಕರೆನ್ಸಿ ನೋಟುಗಳು ಎಂದು ನೇಪಾಳ ಬ್ಯಾಂಕ್ ತಿಳಿಸಿದೆ. ಈ ನೋಟುಗಳಿಗೆ ಇನ್ನೂ ನೇಪಾಳದಲ್ಲಿ ಮಾನ್ಯತೆ ದೊರೆತಿಲ್ಲ ಎಂದು ಬ್ಯಾಂಕ್‌ನ ವಕ್ತಾರ ನಾರಾಯಣ್ ಪೌದೆಲ್ ತಿಳಿಸಿದ್ದಾರೆ.

ಭಾರತ ಸರಕಾರವು ವಿದೇಶ ವಿನಿಮಯ ಕಾನೂನಿನನ್ವಯ (ಎಪ್‌ಇಎಂಎ) ಅಧಿಸೂಚನೆಯೊಂದನ್ನು ಕಳಿಸಿದ ಬಳಿಕ ಇದನ್ನು ನೇಪಾಳ ಸರಕಾರ ಮಾನ್ಯ ಮಾಡಲಿದೆ ಎಂದವರು ತಿಳಿಸಿದ್ದಾರೆ.

ಭಾರತವು ಅಧಿಸೂಚನೆ ಹೊರಡಿಸಿದ ಬಳಿಕ ನೇಪಾಳದ ಜನತೆ ನಿರ್ಧಿಷ್ಟ ಮೊತ್ತದ ಭಾರತೀಯ ಕರೆನ್ಸಿಯನ್ನು ತಮ್ಮ ಬಳಿ ಹೊಂದಿರಲು ಸಾಧ್ಯವಾಗುತ್ತದೆ. ನೇಪಾಳದಲ್ಲಿರುವ ಜನತೆ ಇನ್ನೂ ಅಮಾನ್ಯಗೊಂಡಿರುವ ಭಾರತೀಯ ನೋಟುಗಳನ್ನು ಹೊಂದಿದ್ದರೆ ಅವನ್ನು ಬದಲಿಸಲು ನೆರವಾಗುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಒಂದು ಕಾರ್ಯಪಡೆಯನ್ನು ರೂಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News