ನೂತನ ಆದೇಶವನ್ನೂ ನ್ಯಾಯಾಲಯದಲ್ಲಿ ಪ್ರಶ್ನಿಸುವೆ ನ್ಯೂಯಾರ್ಕ್ ಅಟಾರ್ನಿ ಜನರಲ್

Update: 2017-03-07 16:26 GMT

ನ್ಯೂಯಾರ್ಕ್, ಮಾ. 7: ಆರು ದೇಶಗಳ ಜನರು ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪರಿಷ್ಕೃತ ಆದೇಶದಲ್ಲೂ ಮುಸ್ಲಿಮರ ವಿರುದ್ಧ ತಾರತಮ್ಯ ನಡೆಸುವ ಉದ್ದೇಶವಿದೆ ಹಾಗೂ ಅದರ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ನ್ಯೂಯಾರ್ಕ್‌ನ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಅಟಾರ್ನಿ ಜನರಲ್ ಮಂಗಳವಾರ ಹೇಳಿದ್ದಾರೆ.

‘‘ಶ್ವೇತಭವನವು ನಿಷೇಧದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿರಬಹುದಾದರೂ, ಮುಸ್ಲಿಮರ ವಿರುದ್ಧ ತಾರತಮ್ಯ ನಡೆಸುವ ಧೋರಣೆ ಸ್ಪಷ್ಟವಾಗಿಯೇ ಅದರಲ್ಲಿ ಇದೆ. ಇದು ಅಧ್ಯಕ್ಷ ಟ್ರಂಪ್‌ರ ಕಠೋರ ನೀತಿಗಳ ಗೊಂದಲದಲ್ಲಿ ಸಿಲುಕಿಕೊಂಡ ಕುಟುಂಬಗಳಿಗೆ ಹಾನಿ ಮಾಡುವುದಷ್ಟೇ ಅಲ್ಲ, ನಮ್ಮ ವೌಲ್ಯಗಳಿಗೆ ಸಾರಾಸಗಟು ವಿರುದ್ಧವಾಗಿದೆ ಹಾಗೂ ನಮ್ಮನ್ನು ಕಡಿಮೆ ಸುರಕ್ಷಿತವನ್ನಾಗಿಸುತ್ತದೆ’’ ಎಂದು ಎರಿಕ್ ಶ್ನೈಡರ್‌ಮನ್ ಹೇಳಿದರು.

ಟ್ರಂಪ್ ‘ಸಂವಿಧಾನಕ್ಕಿಂತ ಮೇಲಲ್ಲ’ ಎನ್ನುವುದನ್ನು ದೇಶಾದ್ಯಂತದ ನ್ಯಾಯಾಲಯಗಳು ಸ್ಪಷ್ಟಪಡಿಸಿವೆ ಎಂದರು.

ತನ್ನ ಕಚೇರಿಯು ನೂತನ ಆದೇಶವನ್ನು ವಿವರವಾಗಿ ಅಧ್ಯಯನ ಮಾಡುತ್ತಿದೆ ಎಂದು ಹೇಳಿದ ಶ್ನೈಡರ್‌ಮ್ಯಾನ್, ನ್ಯೂಯಾರ್ಕ್‌ನ ಕುಟುಂಬಗಳು, ಸಂಸ್ಥೆಗಳು ಮತ್ತು ಆರ್ಥಿಕತೆಯನ್ನು ರಕ್ಷಿಸಲು ಮತ್ತೊಮ್ಮೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ತಾನು ಸಿದ್ಧನಾಗಿದ್ದೇನೆ ಎಂದರು.

  ಟ್ರಂಪ್ ಸೋಮವಾರ ಪರಿಷ್ಕೃತ ಮುಸ್ಲಿಮ್ ನಿಷೇಧ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಆದೇಶವು ಆರು ಮುಸ್ಲಿಮ್ ಬಾಹುಳ್ಯದ ದೇಶಗಳ ನಾಗರಿಕರಿಗೆ ಅಮೆರಿಕ ವೀಸಾ ನೀಡುವುದನ್ನು ನಿಷೇಧಿಸುತ್ತದೆ.

ನಿಷೇಧಿತ ದೇಶಗಳ ಪಟ್ಟಿಯಲ್ಲಿ ಇರಾನ್, ಸುಡಾನ್, ಯಮನ್, ಸೊಮಾಲಿಯ, ಸಿರಿಯ, ಲಿಬಿಯಗಳು ಸೇರಿವೆ. ಹೊಸ ಪಟ್ಟಿಯಿಂದ ಇರಾಕ್‌ನ ಹೆಸರನ್ನು ತೆಗೆಯಲಾಗಿದೆ.

ಭಾರತೀಯ ಅಮೆರಿಕನ್ ಸಂಸದರ ವಿರೋಧ

ವಾಶಿಂಗ್ಟನ್, ಮಾ. 7: ಆರು ಮುಸ್ಲಿಮ್ ಬಾಹುಳ್ಯದ ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶ ನಿಷೇಧಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನೂತನ ಪರಿಷ್ಕೃತ ಆದೇಶವನ್ನು ಖ್ಯಾತ ಭಾರತೀಯ-ಅಮೆರಿಕನ್ ಸಂಸದರು ಟೀಕಿಸಿದ್ದಾರೆ.

‘‘ತಪ್ಪು ಮಾಡಬೇಡಿ. ಈ ನಿಷೇಧ ನಮ್ಮನ್ನು ಸುರಕ್ಷಿತವಾಗಿಡುವುದಿಲ್ಲ. ದೇಶದಲ್ಲಿ ತಲೆಯೆತ್ತಿರುವ ಭಯೋತ್ಪಾದನೆಯ ಬೆದರಿಕೆಯನ್ನು ನಿಭಾಯಿಸುವ ಹಂತದಲ್ಲಿ, ಮುಸ್ಲಿಮ್ ಸಮುದಾಯವನ್ನು ಪ್ರತ್ಯೇಕಗೊಳಿಸುವುದು ಅಮೆರಿಕನ್ನರ ಜೀವಗಳನ್ನು ಅಪಾಯಕ್ಕೊಡ್ಡುತ್ತದೆ. ಏನೇ ಬದಲಾವಣೆ ಮಾಡಿದರೂ, ಈ ಆದೇಶವು ಅನೈತಿಕವಾಗಿದೆ ಹಾಗೂ ಮೂಲಭೂತವಾಗಿ ಅಮೆರಿಕದ ಪರಂಪರೆಗೆ ವಿರುದ್ಧವಾಗಿದೆ’’ ಎಂದು ಕ್ಯಾಲಿಫೋರ್ನಿಯ ಸೆನೆಟರ್ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಇದೇ ಅಭಿಪ್ರಾಯವನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸದಸ್ಯರಾದ ಅಮಿ ಬೇರಾ, ರಾಜಾ ಕೃಷ್ಣಮೂರ್ತಿ, ರೋ ಖನ್ನಾ ಮತ್ತು ಪ್ರಮೀಳಾ ಜಯಪಾಲ್ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News