ದೊರೆ ಸಲ್ಮಾನ್ ರಂಝಾನ್ ಸಂದೇಶ

Update: 2017-05-27 16:36 GMT

ಜಿದ್ದಾ,ಮೇ 27: ಪವಿತ್ರ ರಂಝಾನ್ ತಿಂಗಳ ಆರಂಭದ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮದ ಎರಡು ಪರಮಪವಿತ್ರ ಮಸೀದಿಗಳ ಪಾಲಕರಾದ ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಅಲ್ ಸೌದ್, ಜಗತ್ತಿನಾದ್ಯಂತದ ಎಲ್ಲಾ ಮುಸ್ಲಿಮರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇಸ್ಲಾಂ ಧರ್ಮವು ಎದುರಿಸುತ್ತಿರುವ ಹಲವಾರು ಬಿಕ್ಕಟ್ಟುಗಳು, ಸವಾಲುಗಳು ಹಾಗೂ ಬೆದರಿಕೆಗಳನ್ನು ಎದುರಿಸಲು ಸಮುದಾಯದಲ್ಲಿ ಏಕತೆ ಹಾಗೂ ಒಗ್ಗಟ್ಟಿನ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.

ಪವಿತ್ರ ರಂಝಾನ್ ತಿಂಗಳಲ್ಲಿ ಉಪವಾಸ ವ್ರತದ ಮಹತ್ವದ ಬಗ್ಗೆ ತನ್ನ ಸಂದೇಶದಲ್ಲಿ ವಿವರಿಸಿರುವ ದೊರೆ ಸಲ್ಮಾನ್ ಅವರು ದಯೆ, ದಾನ ಹಾಗೂ ಪ್ರಾರ್ಥನೆಯ ಮೂಲಕ ಅಲ್ಲಾಹುವಿಗೆ ಕೃತಜ್ಞತೆಯನ್ನು ಅರ್ಪಿಸಬೇಕಾಗಿದೆಯೆಂದಿದಾದರೆ.

   ‘‘ದೊರೆ ಅಬ್ದುಲ್ ಆಝೀಝ್ ಅವರಿಂದ ಸ್ಥಾಪಿಸಲ್ಪಟ್ಟಾಗಿನಿಂದಲೂ ಸೌದಿ ಸಾಮ್ರಾಜ್ಯವು ಅರಬ್ ಹಾಗೂ ಇಸ್ಲಾಮಿಕ್ ಜಗತ್ತುಗಳನ್ನು ಒಟ್ಟುಗೂಡಿಸಲು ಹಾಗೂ ಮುಸ್ಲಿಮರಲ್ಲಿ ಏಕತೆಯನ್ನು ಮೂಡಿಸುವ ಪ್ರತಿಯೊಂದು ಪ್ರಯತ್ನವನ್ನು ಬೆಂಬಲಿಸುತ್ತಲೇ ಬಂದಿದೆ. ಅಲ್ಲಾಹುವಿನ ಇಚ್ಛೆಯಂತೆ ಈ ಉದಾತ್ತವಾದ ಗುರಿಯನ್ನು ಸಾಧಿಸಲು ಅದು ಸದಾ ಬದ್ಧವಾಗಿದೆ’’ ಎಂದು ಅವರು ರಂಝಾನ್ ತಿಂಗಳ ಆರಂಭಕ್ಕೆ ಮುನ್ನ ಶುಕ್ರವಾರ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ.

   ‘‘ತೀವ್ರವಾದ ಹಾಗೂ ಭಯೋತ್ಪಾದನೆಯ ಎಲ್ಲಾ ರೂಪಗಳನ್ನು ಹಾಗೂ ಆವತಾರಗಳನ್ನು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯವನ್ನು ಒಗ್ಗೂಡಿಸಲು ನಾವು ನಡೆಸುತ್ತಿರುವ ಪ್ರಯತ್ನಗಳಿಗೆ ಕೆಲವು ದಿನಗಳ ಹಿಂದೆ ರಿಯಾದ್‌ನಲ್ಲಿ ನಡೆದ ಮುಸ್ಲಿಂ ಜಗತ್ತಿನ ನಾಯಕರ ಶೃಂಗಸಭೆ ಸಾಕ್ಷಿಯಾಗಿದೆ. ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಜಾಗತಿಕ ಕೇಂದ್ರದ ಸ್ಥಾಪನೆಯಾಗಲು ಆಶೀರ್ವದಿಸಿದ್ದಕ್ಕಾಗಿ ಅಲ್ಲಾಹುವಿಗೆ ನಾವು ಕೃತಜ್ಞರಾಗಿದ್ದೇವೆ. ಇಸ್ಲಾಂ ಧರ್ಮವು ಕರುಣೆ, ಸೌಮ್ಯತೆ ಹಾಗೂ ಶಾಂತಿಯುತ ಸಹಬಾಳ್ವೆಯ ಧರ್ಮವಾಗಿದೆಯೆಂದವರು ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News