ಭರತನಾಟ್ಯ ಡ್ಯಾನ್ಸರ್ ಕ್ರಿಕೆಟ್ ಐಕಾನ್ ಆದರು

Update: 2017-07-13 05:29 GMT

ಹೈದರಾಬಾದ್, ಜು.13: ಬಾಲ್ಯದಲ್ಲಿ ಭರತನಾಟ್ಯ ಡ್ಯಾನ್ಸರ್ ಆಗಿದ್ದ ಹೈದರಾಬಾದ್‌ನ ಮಿಥಾಲಿ ರಾಜ್ ಇದೀಗ ಮಹಿಳಾ ಕ್ರಿಕೆಟ್‌ನ ಐಕಾನ್ ಆಟಗಾರ್ತಿಯಾಗಿ ಬೆಳೆದು ನಿಂತಿದ್ದಾರೆ.

ಹೈದರಾಬಾದ್‌ನ ಮಾಜಿ ವೇಗದ ಬೌಲರ್ ಜ್ಯೋತಿ ಪ್ರಸಾದ್ ಹಾಗೂ ದಿವಂಗತ ಎನ್‌ಐಎಸ್ ಕೋಚ್ ಸಂಪತ್ ಕುಮಾರ್ ಅವರು ಮಿಥಾಲಿಯವರನ್ನು ಓರ್ವ ಶ್ರೇಷ್ಠ ಕ್ರಿಕೆಟ್ ಆಟಗಾರ್ತಿಯಾಗಿ ರೂಪಿಸಿದ ಶಿಲ್ಪಿಗಳಾಗಿದ್ದಾರೆ. ಮಿಥಾಲಿಗೆ 10 ವರ್ಷವಾಗಿದ್ದಾಗಲೇ ಪ್ರಸಾದ್ ಆಕೆಯಲ್ಲಿ ಕ್ರಿಕೆಟ್ ಪ್ರತಿಭೆ ಇರುವುದನ್ನು ಗುರುತಿಸಿಕೊಂಡಿದ್ದರು. ಸಂಪತ್ ಅವರು ಮಿಥಾಲಿಯನ್ನು ವಿಶ್ವ ದರ್ಜೆ ಆಟಗಾರ್ತಿಯಾಗಿ ರೂಪಿಸಿದ್ದರು.

ಮಿಥಾಲಿ ಕುಟುಂಬದವರು ಆಕೆ ಓರ್ವ ಭರತನಾಟ್ಯ ಡ್ಯಾನ್ಸರ್ ಆಗಬೇಕೆಂದು ಬಯಸಿದ್ದರು. ಆದರೆ, ಮಿಥಾಲಿಯ ತಂದೆ ದೊರೈ ರಾಜು ತಮ್ಮ ಮಗಳನ್ನು 10ನೆ ವಯಸ್ಸಿನಲ್ಲಿ ಹೈದರಾಬಾದ್‌ನ ಸೈಂಟ್‌ಜಾನ್ಸ್ ಕೋಚಿಂಗ್ ಕ್ಯಾಂಪ್‌ಗೆ ಸೇರಿಸಿದ್ದರು.

''ನನ್ನ ಮಗ ಕೋಚಿಂಗ್ ಪಡೆಯುತ್ತಿದ್ದ ಕ್ರಿಕೆಟ್ ಕ್ಯಾಂಪ್‌ಗೆ ಮಿಥಾಲಿಯನ್ನು ಸೇರಿಸಿದ್ದೆ. ಅಲ್ಲಿ ನನ್ನ ಸ್ನೇಹಿತ ಜ್ಯೋತಿ ಪ್ರಸಾದ್ ಇದ್ದರು. ಅವರು ನನ್ನ ಮಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿದರು. ಮಗನಿಗಿಂತ ಮಗಳಿಗೇ ಕ್ರಿಕೆಟ್ ಭವಿಷ್ಯ ಉಜ್ವಲವಾಗಿದೆ'' ಎಂದು ಹೇಳಿದ್ದರು ಎಂದು ದೊರೈ ರಾಜು ಹೇಳಿದ್ದಾರೆ.

  ''ಜ್ಯೋತಿ ಪ್ರಸಾದ್ ಸಲಹೆ ಮೇರೆಗೆ ಮಿಥಾಲಿಯನ್ನು ಸಂಪತ್‌ಕುಮಾರ್ ಬಳಿ ಕರೆದುಕೊಂಡು ಹೋಗಿದ್ದೆ. ಸಂಪತ್ ತುಂಬಾ ಕಟ್ಟುನಿಟ್ಟಿನ ಕೋಚ್ ಆಗಿದ್ದರು. ಮಿಥಾಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಹಲವು ದಾಖಲೆಯನ್ನೂ ಮುರಿಯುತ್ತಾರೆ ಎಂದು ಸಂಪತ್ ಭವಿಷ್ಯ ನುಡಿದಿದ್ದರು. ಅವರ ಭವಿಷ್ಯ ಈಗ ನಿಜವಾಗಿದೆ. ನನ್ನ ಮಗಳು ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಸ್ಕೋರರ್ ಆಗಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ'' ಎಂದು ದೊರೈರಾಜು ಸಂತಸ ವ್ಯಕ್ತಪಡಿಸಿದ್ದಾರೆ.

1999ರಲ್ಲಿ ತನ್ನ 16ನೆ ವಯಸ್ಸಿನಲ್ಲಿ ಐರ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ್ದ ಮಿಥಾಲಿ ಅಜೇಯ 114 ರನ್ ಗಳಿಸಿದ್ದರು. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಕಿರಿಯ ಆಟಗಾರ್ತಿ ಎನಿಸಿಕೊಂಡಿದ್ದರು. ಆ ಬಳಿಕ ಅವರು ಹಿಂತಿರುಗಿ ನೋಡಲೇ ಇಲ್ಲ. ಇದೀಗ 6,000ಕ್ಕೂ ಅಧಿಕ ರನ್ ಕಲೆ ಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News