ಫ್ರಾನ್ಸ್: ರೈಲು ನಿಲ್ದಾಣದಲ್ಲಿ ಶಂಕಿತ ಉಗ್ರನಿಂದ ಇಬ್ಬರು ಮಹಿಳೆಯರ ಹತ್ಯೆ
Update: 2017-10-01 23:28 IST
ಪ್ಯಾರಿಸ್,ಅ.1: ದಕ್ಷಿಣ ಫ್ರಾನ್ಸ್‌ನ ಮಾರ್ಸೆಲೆ ನಗರದ ಜನದಟ್ಟಣೆಯ ರೈಲು ನಿಲ್ದಾಣದಲ್ಲಿ ರವಿವಾರ ಹಾಡುಹಗಲೇ ಶಂಕಿತ ಉಗ್ರನೊಬ್ಬ ಇಬ್ಬರು ಮಹಿಳಾ ಪ್ರಯಾಣಿಕರನ್ನು ಚೂರಿಯಿಂದ ಸೀಳಿ ಹತ್ಯೆಗೈದಿದ್ದಾನೆ. ಆನಂತರ ಸ್ಥಳಕ್ಕೆ ಧಾವಿಸಿದ ಸೈನಿಕರು ಹಂತಕನನ್ನು ಗುಂಡಿಕ್ಕಿ ಕೊಂದಿದ್ದಾರೆ. ಮಧ್ಯಾಹ್ನದ ವೇಳೆಗೆ ಘಟನೆ ನಡೆದಿದ್ದು, ಇಡೀ ಪ್ರದೇಶನ್ನು ಈಗ ಸಶಸ್ತ್ರ ಪೊಲೀಸರು ಹಾಗೂ ಸೈನಿಕರು ಸುತ್ತುವರಿದಿದ್ದಾರೆ. ಹಂತಕನು ಒಬ್ಬಾಕೆಯ ಗಂಟಲನ್ನು ಸೀಳಿ ಹತ್ಯೆಗೈದಿದ್ದು, ಇನ್ನೊಬ್ಬಾಕೆಯ ಹೊಟ್ಟೆಗೆ ಇರಿದಿದ್ದಾನೆ. ಇದೊಂದು ಭಯೋತ್ಪಾದಕ ಸಂಘಟನೆಯು ಶಾಮೀಲಾಗಿರುವ ಕೃತ್ಯವೇ ಎಂಬ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ಪ್ಯಾರಿಸ್‌ನ ಪ್ರಾಸಿಕ್ಯೂಟರ್ ಕಾರ್ಯಾಲಯ ತಿಳಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಸರಣಿ ಭಯೋತ್ಪಾದಕ ದಾಳಿಗಳಿಗೆ ಸಾಕ್ಷಿಯಾದ ಫ್ರಾನ್ಸ್‌ನಲ್ಲಿ ಕಟ್ಟೆಚ್ಚರದ ಸ್ಥಿತಿ ಮುಂದುವರಿದಿರುವಂತೆಯೇ ಈ ಹತ್ಯೆಗಳು ನಡೆದಿವೆ.