ಅಮೆರಿಕ: 2016ರಲ್ಲಿ 6,100 ದ್ವೇಷಾಪರಾಧಗಳು

Update: 2017-11-14 17:49 GMT

ವಾಶಿಂಗ್ಟನ್, ನ. 14: ಅಮೆರಿಕದಲ್ಲಿ ಕಪ್ಪು ವರ್ಣೀಯರು, ಯಹೂದಿಗಳು, ಮುಸ್ಲಿಮರು ಮತ್ತು ಎಲ್‌ಜಿಬಿಟಿ (ಸಲಿಂಗಿ ಮಹಿಳೆಯರು, ಸಲಿಂಗಿ ಪುರುಷರು, ಉಭಯಲಿಂಗಿಗಳು ಮತ್ತು ಅಡ್ಡಲಿಂಗಿಗಳು)ಗಳನ್ನು ಗುರಿಯಾಗಿಸಿ ನಡೆಯುತ್ತಿರುವ ಆಕ್ರಮಣಗಳ ಸಂಖ್ಯೆ ಸತತ ಎರಡನೆ ವರ್ಷವಾದ 2016ರಲ್ಲೂ ಗಣನೀಯವಾಗಿ ಹೆಚ್ಚಿದೆ ಎಂದು ಎಫ್‌ಬಿಐ ಬಿಡುಗಡೆ ಮಾಡಿದ ಅಂಕಿಸಂಖ್ಯೆಗಳು ತಿಳಿಸಿವೆ.

ಕಳೆದ ವರ್ಷ 6,100ಕ್ಕೂ ಅಧಿಕ ದ್ವೇಷಾಪರಾಧಗಳು ನಡೆದಿವೆ. ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು 5 ಶೇಕಡದಷ್ಟು ಹೆಚ್ಚಾಗಿದೆ.

ಈ ಅವಧಿಯಲ್ಲಿ 4,229 ಜನಾಂಗೀಯ ಪ್ರೇರಿತ ದಾಳಿಗಳು ನಡೆದವು. ಈ ಪೈಕಿ ಅರ್ಧಕ್ಕೂ ಹೆಚ್ಚು ದಾಳಿಗಳು ಕಪ್ಪು ವರ್ಣೀಯರ ವಿರುದ್ಧ ನಡೆದವು ಹಾಗೂ 20 ಶೇಕಡದಷ್ಟು ದಾಳಿಗಳು ಬಿಳಿಯರ ವಿರುದ್ಧ ನಡೆದಿವೆ ಎಂದು ವರದಿ ಹೇಳಿದೆ.

ಎಲ್‌ಜಿಬಿಟಿ ಸಮುದಾಯದ ವಿರುದ್ಧ 2015ರಲ್ಲಿ 203 ದಾಳಿಗಳು ನಡೆದರೆ, ಕಳೆದ ವರ್ಷ ಆ ಸಂಖ್ಯೆ 234ಕ್ಕೆ ಏರಿತು.

ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಅವಧಿಯಲ್ಲಿ ಮುಸ್ಲಿಮರು, ಯಹೂದಿಗಳು, ಕರಿಯರು ಮತ್ತು ಇತರರ ವಿರುದ್ಧದ ದಾಳಿಗಳಲ್ಲಿ ಏರಿಕೆಯಾಗಿತ್ತು ಎಂಬುದಾಗಿ ನಾಗರಿಕ ಹಕ್ಕುಗಳ ಗುಂಪುಗಳು ದಾಖಲಿಸಿರುವ ಅಂಕಿಅಂಶಗಳು ಹೇಳಿವೆ. ಈ ಅವಧಿಯಲ್ಲಿ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಇತರ ವಲಸಿಗರು, ಅದರಲ್ಲೂ ವಿಶೇಷವಾಗಿ ಮುಸ್ಲಿಮರ ವಿರುದ್ಧ ವಾಗ್ದಾಳಿಗಳನ್ನು ನಡೆಸಿದ್ದರು.

2015ರಲ್ಲಿ ಮುಸ್ಲಿಮರ ವಿರುದ್ಧ 257 ದ್ವೇಷ ದಾಳಿಗಳು ನಡೆದರೆ, 2016ರಲ್ಲಿ 307 ದಾಳಿಗಳು ನಡೆದಿವೆ. 2001 ಸೆಪ್ಟಂಬರ್ 11ರ ಭಯೋತ್ಪಾದಕ ದಾಳಿ ಬಳಿಕ, ಇದು ಅತ್ಯಂತ ಹೆಚ್ಚಿನ ಸಂಖ್ಯೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News