ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಮರಳುವ ಸಾಧ್ಯತೆ: ಟ್ರಂಪ್

Update: 2018-01-11 18:01 GMT

ವಾಶಿಂಗ್ಟನ್, ಜ. 11: ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಅಮೆರಿಕ ಮರಳಬಹುದಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ಅವರು ಹೆಚ್ಚಿನ ವಿವರಗಳನ್ನು ನೀಡಲಿಲ್ಲ.

‘‘ನಿಜವಾಗಿ ಹೇಳಬೇಕೆಂದರೆ, ಈ ಒಪ್ಪಂದದ ಬಗ್ಗೆ ನನಗೇನೂ ಸಮಸ್ಯೆಯಿಲ್ಲ. ಆದರೆ, ಅವರು ಸಹಿ ಹಾಕಿದ ಒಪ್ಪಂದದ ಬಗ್ಗೆ ನನಗೆ ಅಸಮಾಧಾನವಿದೆ. ಯಾಕೆಂದರೆ, ಎಂದಿನಂತೆ ಅವರು ಕೆಟ್ಟ ವ್ಯವಹಾರವೊಂದನ್ನು ನಡೆಸಿದ್ದಾರೆ’’ ಎಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ನುಡಿದರು.

‘‘ಹಾಗಾಗಿ, ನಾವು ಒಪ್ಪಂದಕ್ಕೆ ಮರಳಬಹುದಾಗಿದೆ’’ ಎಂದರು.

ಜಾಗತಿಕ ತಾಪಮಾನಕ್ಕೆ ಕಾರಣವಾಗುವ ಅನಿಲಗಳ ಬಿಡುಗಡೆಯನ್ನು ನಿರ್ಬಂಧಿಸುವುದಕ್ಕೆ ಒತ್ತು ನೀಡುವ 2015ರ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹೊರಬರುವುದಾಗಿ ಟ್ರಂಪ್ ಕಳೆದ ವರ್ಷದ ಜೂನ್‌ನಲ್ಲಿ ಘೋಷಿಸಿದ್ದರು.

ಭಾರತದಂಥ ದೇಶಗಳೊಂದಿಗೆ ಕೆಲಸ ಮಾಡುವುದು ಒಳ್ಳೆಯದು: ಟ್ರಂಪ್

ಭಾರತ, ರಶ್ಯ ಮತ್ತು ಚೀನಗಳಂಥ ದೇಶಗಳೊಂದಿಗೆ ಕೆಲಸ ಮಾಡುವುದು ‘ಅತ್ಯಂತ ಒಳ್ಳೆಯ ಸಂಗತಿ’ಯಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ರಶ್ಯದೊಂದಿಗಿನ ಸಂಬಂಧವನ್ನು ಸುಧಾರಿಸಲು ತಾನು ನಡೆಸುತ್ತಿರುವ ಪ್ರಯತ್ನಗಳನ್ನು ಅವರು ಸಮರ್ಥಿಸುತ್ತಿದ್ದರು.

ಅತ್ಯಂತ ಬಲಿಷ್ಠ ಸೇನೆ, ಬೃಹತ್ ತೈಲ ಮತ್ತು ಅನಿಲ ಹಾಗೂ ಅಗಾಧ ಪ್ರಮಾಣದ ವಿದ್ಯುತ್ ಉತ್ಪಾದನೆಗಾಗಿ ಕೆಲಸ ಮಾಡುತ್ತಿರುವವನು ತಾನು ಎಂದು ನಾರ್ವೆಯ ಪ್ರಧಾನಿ ಎರ್ನಾ ಸಾಲ್ಬರ್ಗ್ ಶ್ವೇತಭವನದಲ್ಲಿ ಬುಧವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ಹೇಳಿದರು.

‘‘ರಶ್ಯ ಆಗಲಿ, ಚೀನಾ ಆಗಲಿ, ಭಾರತ ಆಗಲಿ ಅಥವಾ ಈ ಜಗತ್ತಿನಲ್ಲಿರುವ ಯಾವುದೇ ದೇಶವಾಗಲಿ, ಅವುಗಳೊಂದಿಗೆ ಕೆಲಸ ಮಾಡುವುದು ಉತ್ತಮ ಸಂಗತಿಯಾಗಿದೆ. ಇದು ಕೆಟ್ಟ ಸಂಗತಿಯೇನೂ ಅಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News