ಬಂದೂಕು ನಿಯಂತ್ರಣ ಪರ ಧ್ವನಿ ಎತ್ತಿದ ಟ್ರಂಪ್

Update: 2018-03-02 17:27 GMT

ವಾಶಿಂಗ್ಟನ್, ಮಾ. 2: ಬಂದೂಕು ಖರೀದಿದಾರರ ಹಿನ್ನೆಲೆ ಪರಿಶೀಲನೆಗೆ ‘ಬಲವಾದ’ ಒತ್ತು ನೀಡುವ ಸಮಗ್ರ ಬಂದೂಕು ನಿಯಂತ್ರಣ ಕಾಯ್ದೆಯ ಪರವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಕರೆ ನೀಡಿದ್ದಾರೆ.

ಅದೇ ವೇಳೆ, ಸಂಸದರು, ಅದರಲ್ಲೂ ಮುಖ್ಯವಾಗಿ ರಿಪಬ್ಲಿಕನ್ ಪಕ್ಷದ ಸಂಸದರು ನ್ಯಾಶನಲ್ ರೈಫಲ್ ಅಸೋಸಿಯೇಶನ್ ನೇತೃತ್ವದ ಪ್ರಬಲ ಬಂದೂಕು ಲಾಬಿಗೆ ಹೆದರಿದ್ದಾರೆ ಎಂದು ಅವರು ಆರೋಪಿಸಿದರು.

ಶ್ವೇತಭವನದಲ್ಲಿ ನಡೆದ ಆಡಳಿತಾರೂಢ ರಿಪಬ್ಲಿಕನ್ ಮತ್ತು ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾನಸಿಕ ಅಸ್ವಸ್ಥ ಜನರು ಬಂದೂಕುಗಳನ್ನು ಖರೀದಿಸುವುದನ್ನು ನಿಲ್ಲಿಸಲು ಬಂದೂಕು ಪ್ರದರ್ಶನ ಮಳಿಗೆಗಳು ಮತ್ತು ಇಂಟರ್‌ನೆಟ್‌ನಲ್ಲಿ ಹಿನ್ನೆಲೆ ತನಿಖೆ ಮಾಡುವುದಕ್ಕೆ ಒತ್ತು ನೀಡುವ ಕಾನೂನನ್ನು ಜಾರಿಗೊಳಿಸುವಂತೆ ಸಂಸದರಿಗೆ ಕರೆ ನೀಡಿದರು.

ಅದೇ ವೇಳೆ, ಶಾಲೆಗಳಲ್ಲಿನ ಭದ್ರತೆಯನ್ನು ಹೆಚ್ಚಿಸುವಂತೆ ಮತ್ತು ಜನರು ಕಾನೂನುಬದ್ಧವಾಗಿ ಬಂದೂಕುಗಳನ್ನು ಖರೀದಿಸುವ ಪ್ರಾಯವನ್ನು ಹೆಚ್ಚಿಸುವಂತೆಯೂ ಅವರು ಸೂಚಿಸಿದರು.

ಇತ್ತೀಚೆಗೆ ಫ್ಲೋರಿಡ ಹೈಸ್ಕೂಲೊಂದರಲ್ಲಿ ಹಳೆ ವಿದ್ಯಾರ್ಥಿಯೊಬ್ಬ ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ 17 ಮಂದಿ ಪ್ರಾಣ ಕಳೆದುಕೊಂಡ ಹಿನ್ನೆಲೆಯಲ್ಲಿ, ಬಂದೂಕು ನಿಯಂತ್ರಣ ಪರವಾಗಿ ಭಾರಿ ಜನಾಭಿಪ್ರಾಯ ಹೊರಹೊಮ್ಮುತ್ತಿರುವಂತೆಯೇ ಟ್ರಂಪ್‌ರ ಈ ನಿರ್ಧಾರ ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News