×
Ad

ಇಸ್ರೇಲ್ ಪ್ರಧಾನಿಯ ಪತ್ನಿ ವಿರುದ್ಧ ವಂಚನೆ ಆರೋಪ

Update: 2018-06-21 23:22 IST

ಜೆರುಸಲೇಮ್, ಜೂ.21: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರ ಪತ್ನಿ ಸಾರಾ ನೆತನ್ಯಾಹು ವಿರುದ್ಧ ವಂಚನೆ ಮತ್ತು ವಿಶ್ವಾಸದ್ರೋಹ ಆರೋಪ ದಾಖಲಿಸಲಾಗಿದೆ.

ತಮ್ಮ ಸರಕಾರಿ ನಿವಾಸದಲ್ಲಿ ಸರಕಾರಿ ಬೊಕ್ಕಸದ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪ ಇದಾಗಿದೆ. ‘ಉಪಹಾರ ಆದೇಶ ಪ್ರಕರಣ’ ಎಂದು ಹೆಸರಾಗಿರುವ ಈ ಪ್ರಕರಣದಲ್ಲಿ ಸಾರಾ ನೆತನ್ಯಾಹು, ಪ್ರಧಾನಿಯ ನಿವಾಸದಲ್ಲಿ ನಡೆದ ಊಟ ಉಪಚಾರದ ಖರ್ಚಿಗೆ ಸರಕಾರದಿಂದ 1,00,000 ಡಾಲರ್ ಮೊತ್ತವನ್ನು ಪಾವತಿಸಲಾಗಿದೆ ಎಂದು ಜೆರುಸಲೇಮ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ. ಅಲ್ಲದೆ ಸಾರಾ ನೆತನ್ಯಾಹು ಖಾಸಗಿ ಅಡುಗೆಯವರಿಗೆ ಸುಮಾರು 10,000 ಡಾಲರ್ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಪರಾಧ ಸಾಬೀತಾದರೆ ಗರಿಷ್ಟ 8 ವರ್ಷದ ಜೈಲು ಶಿಕ್ಷೆ ವಿಧಿಸಬಹುದಾಗಿದೆ. 2009ರ ಎಪ್ರಿಲ್‌ನಿಂದ 2013ರ ಮಾರ್ಚ್‌ವರೆಗೆ ಸಾರಾ ನೆತನ್ಯಾಹು ಜೆರುಸಲೇಮ್‌ನ ಕೆಲವು ದುಬಾರಿ ರೆಸ್ಟಾರೆಂಟ್‌ಗಳಿಂದ ಉಪಾಹಾರ ಪೂರೈಕೆಗೆ ಆದೇಶ ನೀಡಿದ್ದರು. 2011ರ ಡಿಸೆಂಬರ್‌ನಲ್ಲಿ ಪ್ರಧಾನಿಯವರ ನಿವಾಸಕ್ಕೆ ಸುಮಾರು 6,500 ಡಾಲರ್‌ಗೂ ಹೆಚ್ಚಿನ ಮೊತ್ತದ ಉಪಾಹಾರವನ್ನು ತರಿಸಿಕೊಳ್ಳಲಾಗಿದೆ.

2012ರ ಎಪ್ರಿಲ್‌ನಲ್ಲಿ ಕುಟುಂಬವು 7,100 ಡಾಲರ್‌ಗೂ ಹೆಚ್ಚಿನ ಮೊತ್ತದ ಉಪಾಹಾರವನ್ನು ತರಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಆದರೆ ನೆತನ್ಯಾಹು ಪರ ವಕೀಲರು ಈ ಆರೋಪವನ್ನು ನಿರಾಕರಿಸಿದ್ದಾರೆ. ಇಸ್ರೇಲ್ ಕಾನೂನಿನ ಪ್ರಕಾರ ಪ್ರಧಾನಿಯ ನಿವಾಸದಲ್ಲಿ ಅಡುಗೆಯಾಳು ಇಲ್ಲದಿದ್ದರೆ ಹೊರಗಿನಿಂದ ಸಿದ್ಧ ಉಪಾಹಾರ ತರಿಸಲು ಆದೇಶ ನೀಡಬಹುದು. ಆದರೆ ನೆತಾನ್ಯಾಹು ಕುಟುಂಬಕ್ಕೆ ಅಡುಗೆಯಾಳನ್ನು ನೀಡಲಾಗಿದ್ದರೂ ಅವರು ಹೊರಗಿನಿಂದ ಉಪಾಹಾರ ತರಿಸಿದ್ದು, ಈ ಮೊತ್ತ ಇಸ್ರೇಲ್‌ನ ನಾಗರಿಕರು ಪಾವತಿಸುವ ತೆರಿಗೆ ಹಣವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಾರಾಂತ್ಯದಲ್ಲಿ ಮನೆಯಲ್ಲಿ ಹಮ್ಮಿಕೊಳ್ಳುತ್ತಿದ್ದ ಖಾಸಗಿ ಕಾರ್ಯಕ್ರಮಗಳಲ್ಲಿ ಉಪಾಹಾರ ಪೂರೈಸುವ ಸಿಬ್ಬಂದಿಗಳಿಗೆ ಸಂಬಳ ನೀಡಲು ಸರಕಾರದ ಹಣ ಬಳಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಈ ಸಿಬ್ಬಂದಿಗಳನ್ನು ಕ್ಲೀನರ್‌ಗಳು ಅಥವಾ ಹೆಚ್ಚುವರಿ ಸಿಬ್ಬಂದಿಗಳು ಎಂದು ದಾಖಲಿಸುವ ಮೂಲಕ ಇವರಿಗೆ ನಿಯಮಬಾಹಿರವಾಗಿ ಹಣ ಪಾವತಿಸಲಾಗಿದೆ. ಸಾರಾ ನೆತನ್ಯಾಹು ಉದ್ದೇಶಪೂರ್ವಕವಾಗಿ ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಲ್ಲದೆ ಪ್ರಧಾನಿಯವರ ಕಚೇರಿಯ ಮಾಜಿ ಉಪ ಮಹಾನಿರ್ದೇಶಕ ಎಝ್ರಾ ಸೈಡಾಫ್ ಅವರು ಸಾರಾ ನೆತನ್ಯಾಹು ಕೃತ್ಯಗಳಿಗೆ ಸಹಕಾರ ನೀಡುತ್ತಿದ್ದರು. ಉಪಹಾರದ ಬಿಲ್ ಪಾವತಿಸಲು ನೆರವಾಗುವ ಮೂಲಕ ಇವರೂ ಕೂಡಾ ವಂಚನೆ ಮತ್ತು ವಿಶ್ವಾಸದ್ರೋಹ ಎಸಗಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಆದರೆ ಇದನ್ನು ಸೈಡಾಫ್ ಪರ ವಕೀಲರು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News