ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಯ ಹತ್ಯೆ?

Update: 2018-11-27 03:38 GMT

ಕೆನಡ, ನ.27: ಕೆನಡಾದಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡುತ್ತಿದ್ದ ಪಂಜಾಬ್ ಮೂಲದ ವಿದ್ಯಾರ್ಥಿಯೋರ್ವನ ಮೃತದೇಹ ಟೊರೆಂಟೊ ಬಳಿ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಆತ್ಮಹತ್ಯೆಯಲ್ಲ; ಉದ್ದೇಶಪೂರ್ವಕ ಹತ್ಯೆ ಎಂದು ಮೃತ ವಿದ್ಯಾರ್ಥಿಯ ಕುಟುಂಬ ಆಪಾದಿಸಿದೆ.

ಮೃತ ಯುವಕನನ್ನು ವಿಶಾಲ್ ಶರ್ಮಾ (21) ಎಂದು ಗುರುತಿಸಲಾಗಿದೆ. ಕೆನಡಾ ಪೊಲೀಸರು ಯುವಕನ ತಂದೆ ನರೇಶ್ ಶರ್ಮಾ ಅವರಿಗೆ ಕರೆ ಮಾಡಿ, "ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಮೂರು ದಿನಗಳ ಒಳಗಾಗಿ ತನಿಖೆಯ ವಿವರಗಳನ್ನು ಕುಟುಂಬಕ್ಕೆ ನೀಡುತ್ತೇವೆ" ಎಂದು ಹೇಳಿದ್ದಾರೆ. ಆದರೆ ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಬಗ್ಗೆ ಪೊಲೀಸರಿಗೆ ಯಾವ ಸುಳಿವೂ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಶಾಲ್ ದೇಹ ತೀರಾ ಎತ್ತರದಲ್ಲಿ ನೇತಾಡುತ್ತಿತ್ತು. ಇದು ಆತ್ಮಹತ್ಯೆಯಲ್ಲ ಎನ್ನುವುದಕ್ಕೆ ಪುರಾವೆ ಎಂದು ಕುಟುಂಬ ಪ್ರತಿಪಾದಿಸಿದೆ. "ಆತನಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯಾವ ಕಾರಣವೂ ಇರಲಿಲ್ಲ. ದೇಶದಿಂದ ಹೊರಗಿದ್ದುಕೊಂಡು ಆತ ಏಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು" ಎಂದು ಮೃತನ ಸಂಬಂಧಿ ಜಸ್ವೀಂದರ್ ಕುಮಾರ್ ಪ್ರಶ್ನಿಸಿದ್ದಾರೆ.

ಯುವಕ ಕೆನಡಾನದಲ್ಲಿ ಸಂತೋಷದಿಂದ ಇದ್ದ. ಯಾವುದೇ ಸಮಸ್ಯೆ ಬಗ್ಗೆ ಎಂದೂ ಹೇಳಿಕೊಂಡಿಲ್ಲ ಎಂದು ಕುಟುಂಬ ಸ್ಪಷ್ಟಪಡಿಸಿದೆ. ಕಳೆದ ಜುಲೈನಲ್ಲಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಹುಟ್ಟೂರು ನಭಾಗೆ ಆಗಮಿಸಿದ್ದ ಶರ್ಮಾ, ಸೆಪ್ಟೆಂಬರ್‌ನಲ್ಲಿ ವಾಪಸ್ಸಾಗಿದ್ದ. ಶನಿವಾರ ಮತ್ತು ರವಿವಾರ ಕೂಡಾ ಆತನ ಜತೆಗೆ ದೂರವಾಣಿಯಲ್ಲಿ ಮಾತನಾಡಿದ್ದೆವು ಎಂದು ಕುಟುಂಬದವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News