ನೇಪಾಳದ ಹೆಚ್ಚಿನ ಶಾಲೆಗಳಲ್ಲಿ ಮ್ಯಾಂಡರಿನ್ ಕಡ್ಡಾಯ: ಶಿಕ್ಷಕರಿಗೆ ಚೀನಾದಿಂದ ವೇತನ

Update: 2019-06-15 18:15 GMT

ಕಠ್ಮಂಡು (ನೇಪಾಳ), ಜೂ. 15: ನೇಪಾಳದ ಹೆಚ್ಚಿನ ಶಾಲೆಗಳು ವಿದ್ಯಾರ್ಥಿಗಳು ಚೀನಾದ ಭಾಷೆ ‘ಮ್ಯಾಂಡರಿನ್’ ಕಲಿಯುವುದನ್ನು ಕಡ್ಡಾಯಗೊಳಿಸಿವೆ. ಈ ಭಾಷೆಯನ್ನು ಕಲಿಸುವ ಶಿಕ್ಷಕರ ವೇತನವನ್ನು ಪಾವತಿಸುವುದಾಗಿ ಚೀನಾ ಒಡ್ಡಿರುವ ಆಮಿಷಕ್ಕೆ ಈ ಶಾಲೆಗಳು ಬಲಿಯಾಗಿವೆ ಎಂದು ಶನಿವಾರ ಮಾಧ್ಯಮ ವರದಿಯೊಂದು ತಿಳಿಸಿದೆ.

ತಮ್ಮ ಶಾಲೆಗಳಲ್ಲಿ ಮ್ಯಾಂಡರಿನ್ ಕಡ್ಡಾಯ ವಿಷಯ ಎಂಬುದಾಗಿ ಕನಿಷ್ಠ 10 ಪ್ರತಿಷ್ಠಿತ ಖಾಸಗಿ ಶಾಲೆಗಳ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಹೇಳಿದ್ದಾರೆ ಎಂದು ‘ಹಿಮಾಲಯನ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.

ಪೊಖಾರ, ಧೂಳಿಕೇಲ್ ಮತ್ತು ದೇಶದ ಇತರ ಭಾಗಗಳ ಹೆಚ್ಚಿನ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಚೀನಿ ಭಾಷೆಯನ್ನು ಕಡ್ಡಾಯಗೊಳಿಸಿವೆ ಎಂದು ಶಾಲೆಯೊಂದರ ಮುಖ್ಯಸ್ಥರೊಬ್ಬರು ಹೇಳುತ್ತಾರೆ.

ವಿದೇಶಿ ಭಾಷೆಗಳನ್ನು ಕಲಿಸಲು ಶಾಲೆಗಳಿಗೆ ಅಧಿಕಾರವಿದೆ, ಆದರೆ, ಅವರು ಆ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡುವಂತಿಲ್ಲ ಎಂಬುದಾಗಿ ಸರಕಾರದ ಪಠ್ಯಪುಸ್ತಕ ಅಭಿವೃದ್ಧಿ ಸಮಿತಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಈ ನಿಯಮವು ಖಾಸಗಿ ಶಾಲೆಗಳ ಅಧಿಕಾರಿಗಳಿಗೂ ತಿಳಿದಿದೆ, ಅವರಿಗೆ ಮ್ಯಾಂಡರಿನ್ ಶಿಕ್ಷಕರು ಉಚಿತವಾಗಿ ಸಿಗುವುದರಿಂದಾಗಿ ಅವರು ಈ ನಿಯಮವನ್ನು ಉಪೇಕ್ಷಿಸಿದ್ದಾರೆ.

ಮ್ಯಾಂಡರಿನ್ ಶಿಕ್ಷಕರ ವೇತನವು ಕಠ್ಮಂಡುವಿನಲ್ಲಿರುವ ಚೀನಿ ರಾಯಭಾರ ಕಚೇರಿಯಿಂದ ಪಾವತಿಯಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News