ಪರ್ಷಿಯನ್ ಕೊಲ್ಲಿಯಲ್ಲಿ ಉದ್ವಿಗ್ನತೆ: ಭಾರತೀಯ ತೈಲ ಸಾಗಾಟ ಹಡಗುಗಳಲ್ಲಿ ನೌಕಾಪಡೆ ಅಧಿಕಾರಿಗಳ ನಿಯೋಜನೆ

Update: 2019-06-21 18:07 GMT

ಹೊಸದಿಲ್ಲಿ,ಜೂ.21: ಅಮೆರಿಕ ಮತ್ತು ಇರಾನ್ ನಡುವೆ ಮಿಲಿಟರಿ ಸಂಘರ್ಷದ ಸ್ಪಷ್ಟ ಸಾಧ್ಯತೆಯ ಹಿನ್ನೆಲೆಯಲ್ಲಿ ಪರ್ಷಿಯನ್ ಕೊಲ್ಲಿಯ ಮೂಲಕ ಸಂಚರಿಸುವ ಭಾರತೀಯ ಕಚ್ಚಾ ತೈಲ ಸಾಗಾಟ ಹಡಗುಗಳಲ್ಲಿ ತನ್ನ ಅಧಿಕಾರಿಗಳು ಮತ್ತು ನಾವಿಕರನ್ನು ನಿಯೋಜಿಸಲು ಭಾರತೀಯ ನೌಕಾಪಡೆಯು ಸಜ್ಜಾಗಿದೆ.

ಗುರುವಾರ ಇರಾನ್ ಅಮೆರಿಕದ ಅತ್ಯಾಧುನಿಕ ಡ್ರೋನ್‌ವೊಂದನ್ನು ಹೊಡೆದುರುಳಿಸಿತ್ತು. ಡ್ರೋನ್ ತನ್ನ ವಾಯುಪ್ರದೇಶದಲ್ಲಿ ಹಾರಾಡುತ್ತಿತ್ತು ಎಂದು ಇರಾನ್ ಹೇಳಿಕೊಂಡರೆ,ಅದು ಅಂತರರಾಷ್ಟ್ರಿಯ ವಾಯು ಪ್ರದೇಶದಲ್ಲಿ ಹಾರಾಡುತ್ತಿತ್ತು ಎಂದು ಅಮೆರಿಕ ಪ್ರತಿಪಾದಿಸಿದೆ. ಡ್ರೋನ್ ಅನ್ನು ಹೊರ್ಮುಝ್ ಜಲಸಂಧಿಯಲ್ಲಿ ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇರಾನ್ ತಪ್ಪು ಮಾಡಿದೆ ಎಂದು ಹೇಳಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ದಾಳಿಗೆ ಕರೆ ನೀಡಿದ್ದರಾದರೂ ದಾಳಿ ಆರಂಭಗೊಳ್ಳುವ ಕೆಲವೇ ಗಂಟೆಗಳ ಮುನ್ನ ಅದನ್ನು ಹಿಂದೆಗೆದುಕೊಂಡಿದ್ದಾರೆ.

ಅಮೆರಿಕದ ಡ್ರೋನ್ ತನ್ನ ವಾಯುಪ್ರದೇಶವನ್ನು ಉಲ್ಲಂಘಿಸಿದ್ದಕ್ಕೆ ತನ್ನ ಬಳಿ ‘ವಿವಾದಾತೀತ ’ ಸಾಕ್ಷವಿದೆ ಎಂದು ಇರಾನ್ ಶುಕ್ರವಾರ ಹೇಳಿದ್ದು,ಇದು ತೈಲ ಟ್ಯಾಂಕರ್‌ಗಳ ಮೇಲೆ ಸರಣಿ ದಾಳಿಗಳ ಬಳಿಕ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇರಾನ್ ಈ ದಾಳಿಗಳನ್ನು ನಡೆಸಿದೆ ಎಂದು ಅಮೆರಿಕವು ಆಪಾದಿಸಿದೆ. ಪರ್ಷಿಯನ್ ಕೊಲ್ಲಿಯಲ್ಲಿ ಕಾರ್ಯಾಚರಿಸುತ್ತಿರುವ ಭಾರತೀಯ ಕಚ್ಚಾ ತೈಲ ಟ್ಯಾಂಕರ್‌ಗಳಲ್ಲಿ ಓರ್ವ ಅಧಿಕಾರಿ ಮತ್ತು ಇಬ್ಬರು ನಾವಿಕರನ್ನು ನಿಯೋಜಿಸಲು ಭಾರತೀಯ ನೌಕಾಪಡೆಯು ಉದ್ದೇಶಿಸಿದೆ ಎನ್ನಲಾಗಿದೆ. ಈ ತಂಡಗಳು ಹೊರ್ಮುಝ್ ಜಲಸಂಧಿಯನ್ನು ಪ್ರವೇಶಿಸುವ ಮತ್ತು ಅಲ್ಲಿಂದ ಹೊರಗೆ ಬರುವ ಭಾರತೀಯ ಟ್ಯಾಂಕರ್‌ಗಳಿಗೆ ಬೆಂಗಾವಲಾಗಲಿವೆ. ಟ್ಯಾಂಕರ್‌ಗಳಲ್ಲಿ ಹೆಲಿಕಾಪ್ಟರ್ ಡೆಕ್‌ಗಳಿದ್ದರೆ ಭಾರತೀಯ ನೌಕಾಪಡೆ ತಂಡಗಳನ್ನು ಹೆಲಿಕಾಪ್ಟರ್‌ಗಳ ಮೂಲಕ ಇಳಿಸಲಾಗುವುದು ಅಥವಾ ಬೋಟ್‌ನ ಮೂಲಕ ತಲುಪಿಸಲಾಗುವುದು.

ಬೃಹತ್ ಗಾತ್ರದ ಟ್ಯಾಂಕರ್‌ಗಳು ಸೇರಿದಂತೆ ಸುಮಾರು ಐದರಿಂದ ಎಂಟು ಭಾರತೀಯ ಕಚ್ಚಾ ತೈಲ ಸಾಗಾಟ ಹಡಗುಗಳು ಪ್ರತಿ ದಿನ ಪರ್ಷಿಯನ್ ಕೊಲ್ಲಿಯನ್ನು ಹಾದು ಹೋಗುತ್ತವೆ ಮತ್ತು ಭಾರತದ ತೈಲ ಅಗತ್ಯವನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಕೊಲ್ಲಿಯ ಇರಾಕ್,ಸೌದಿ ಅರೇಬಿಯ,ಯುಎಇ ಮತ್ತು ಕುವೈತ್‌ಗಳಿಂದ ಭಾರತದ ಶೇ.63.29ರಷ್ಟು ತೈಲ ಆಮದಾಗುತ್ತಿದೆ. ತೀರ ಇತ್ತೀಚಿನವರೆಗೂ ಇರಾನ್ ಈ ಪ್ರದೇಶದಲ್ಲಿ ಭಾರತಕ್ಕೆ ಪ್ರಮುಖ ಪೂರೈಕೆದಾರನಾಗಿತ್ತು.

ಭಾರತೀಯ ನೌಕಾಪಡೆಯ ವಿನಾಶಕ ನೌಕೆ ಐಎನ್‌ಎಸ್ ಚೆನ್ನೈ ಮತ್ತು ಗಸ್ತು ನೌಕೆ ಐಎನ್‌ಎಸ್ ಸುನಯನಾ ಈಗಾಗಲೇ ಪರ್ಷಿಯನ್ ಕೊಲ್ಲಿಯಲ್ಲಿವೆ,ಜೊತೆಗೆ ನೌಕಾಪಡೆಯ ಹೆಲಿಕಾಪ್ಟರ್‌ಗಳು ವೈಮಾನಿಕ ನಿಗಾ ವಹಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News