×
Ad

ಏರ್ ಇಂಡಿಯ ವಿಮಾನಕ್ಕೆ ಹುಸಿ ಬಾಂಬ್ ಕರೆ; ಲಂಡನ್‌ನಲ್ಲಿ ತುರ್ತು ಭೂಸ್ಪರ್ಶ

Update: 2019-06-27 23:45 IST

ಲಂಡನ್, ಜೂ. 27: ಅಮೆರಿಕದ ನೆವಾರ್ಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾದ ವಿಮಾನವೊಂದು ಗುರುವಾರ ಬ್ರಿಟನ್‌ನ ರಾಯಲ್ ಏರ್ ಫೋರ್ಸ್‌ನ ಯುದ್ಧ ವಿಮಾನಗಳ ಬೆಂಗಾವಲಿನಲ್ಲಿ ಲಂಡನ್‌ನಲ್ಲಿ ಅನಿರೀಕ್ಷಿತವಾಗಿ ಇಳಿಯಿತು. ಇದಕ್ಕೆ ‘ಬಾಂಬ್ ಬೆದರಿಕೆ’ ಕಾರಣ ಎಂಬುದಾಗಿ ವಿಮಾನಯಾನ ಸಂಸ್ಥೆ ಆರಂಭದಲ್ಲಿ ಹೇಳಿತು.

ನಿಮಿಷಗಳ ಬಳಿಕ, ಏರ್ ಇಂಡಿಯಾವು ಈ ಟ್ವೀಟನ್ನು ಅಳಿಸಿ ಹಾಕಿತು ಹಾಗೂ ಯಾವುದೇ ಹೆಚ್ಚುವರಿ ಮಾಹಿತಿಯನ್ನು ಒದಗಿಸಲಿಲ್ಲ.

ಬಳಿಕ, ‘ಅದು ಹುಸಿ ಬಾಂಬ್ ಬೆದರಿಕೆಯಾಗಿತ್ತು’ ಎಂಬುದಾಗಿ ಏರ್ ಇಂಡಿಯಾದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿತು.

 ‘‘ಏರ್ ಇಂಡಿಯಾದ ಮುಂಬೈ-ನೆವಾರ್ಕ್ 191 ವಿಮಾನವು ಲಂಡನ್‌ನಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ ಹಾಗೂ ಎಲ್ಲ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ತೆಗೆದುಕೊಂಡು ವಿಮಾನವು ಭೂಸ್ಪರ್ಶ ಮಾಡಿದೆ. ಈಗ, ಬಾಂಬ್ ಬೆದರಿಕೆ ಹುಸಿಯೆಂಬುದಾಗಿ ಘೋಷಿಸಲಾಗಿದೆ’’ ಎಂಬುದಾಗಿ ಏರ್ ಇಂಡಿಯಾ ವಕ್ತಾರರೊಬ್ಬರು ಹೇಳಿದ್ದಾರೆ ಎಂದು ಎಎನ್‌ಐ ತಿಳಿಸಿದೆ.

ವಿಮಾನ ಬಳಿಕ ತನ್ನ ಯಾನವನ್ನು ಮುಂದುವರಿಸಿದೆ. ಬೆದರಿಕೆ ಕರೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News