ಬರ್ಕಿನಾ ಫ್ಯಾಸೊದಲ್ಲಿ ಉಗ್ರರ ಭೀಕರ ದಾಳಿ: 35 ನಾಗರಿಕರ ಹತ್ಯೆ

Update: 2019-12-25 04:46 GMT

ಬರ್ಕಿನಾ ಫ್ಯಾಸೊ, ಡಿ.25: ಪಶ್ಚಿಮ ಆಫ್ರಿಕಾದ ಬರ್ಕಿನಾ ಫ್ಯಾಸೊದಲ್ಲಿ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ ಕನಿಷ್ಠ 35 ಮಂದಿ ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಮೃತಪಟ್ಟವರಲ್ಲಿ ಬಹುತೇಕ ಎಲ್ಲರೂ ಮಹಿಳೆಯರು ಎಂದು ಇಲ್ಲಿನ ಅಧ್ಯಕ್ಷರು ತಿಳಿಸಿದ್ದಾರೆ.

 ದೇಶದ ಪ್ರಮುಖ ಸೇನಾ ನೆಲೆ ಮೇಲೆ ಉಗ್ರರು ನಡೆಸಿದ ದಾಳಿ ಮತ್ತು ಸೋವುಮ್ ಪ್ರಾಂತ್ಯದ ಅರ್ಬಿಂದಾ ಪಟ್ಟಣದಲ್ಲಿ ನಡೆದ ದಾಳಿಗಳಲ್ಲಿ ಏಳು ಸೈನಿಕರು ಬಲಿಯಾಗಿದ್ದರೆ, ಪ್ರತಿದಾಳಿಯಲ್ಲಿ 80 ಉಗ್ರರು ಹತರಾಗಿದ್ದಾರೆ ಎಂದು ಸೇನೆ ಪ್ರಕಟಿಸಿದೆ.

ಮಾಲಿ ಹಾಗೂ ನೈಜೆರ್ ದೇಶಗಳ ಗಡಿಯಲ್ಲಿರುವ ಬರ್ಕಿನಾ ಫ್ಯಾಸೊ, ನಿರಂತರವಾಗಿ ಉಗ್ರರ ದಾಳಿಗೆ ತುತ್ತಾಗುತ್ತಿದ್ದು, ಸಹೇಲ್ ಪ್ರದೇಶಕ್ಕೆ 2015ರಲ್ಲಿ ಹರಡಿದ ಉಗ್ರರ ಕೃತ್ಯಗಳಿಗೆ ನೂರಾರು ಮಂದಿ ಬಲಿಯಾಗಿದ್ದಾರೆ.

"ದೊಡ್ಡ ಸಂಖ್ಯೆಯ ಉಗ್ರರು ಏಕಕಾಲಕ್ಕೆ ಸೇನಾ ನೆಲೆ ಹಾಗೂ ಅರ್ಬಿಂದಾ ಪಟ್ಟಣದಲ್ಲಿ ನಾಗರಿಕ ಮೇಲೆ ದಾಳಿ ನಡಸಿದರು" ಎಂದು ಸೇನೆ ಹೇಳಿದೆ.

"ಈ ಬರ್ಬರ ದಾಳಿಯಲ್ಲಿ 35 ನಾಗರಿಕರು ಜೀವ ಕಳೆದುಕೊಮಡಿದ್ದು, ಇವರಲ್ಲಿ ಬಹುತೇಕ ಮಹಿಳೆಯರು" ಎಂದು ಅಧ್ಯಕ್ಷ ರೋಚ್ ಮಾರ್ಕ್ ಕ್ರಿಸ್ಟಿನ್ ಕಬೋರ್ ಟ್ವೀಟ್ ಮಾಡಿದ್ದಾರೆ. ದೇಶದ ಭದ್ರತಾ ಪಡೆಗಳು ಮತ್ತು ರಕ್ಷಣಾ ಪಡೆಗಳ "ಸಾಹಸ ಹಾಗೂ ಬದ್ಧತೆ"ಯನ್ನು ಅಧ್ಯಕ್ಷರು ಶ್ಲಾಘಿಸಿದ್ದಾರೆ. ನಾಗರಿಕರ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟವರಲ್ಲಿ 31 ಮಂದಿ ಮಹಿಳೆಯರು ಎಂದು ಸರ್ಕಾರದ ವಕ್ತಾರ ರೆಮಿಸ್ ದಂಜಿನೋವ್ ವಿವರಿಸಿದ್ದಾರೆ. ದೇಶದಲ್ಲಿ 48 ಗಂಟೆಗಳ ರಾಷ್ಟ್ರೀಯ ಶೋಕಾಚರಣೆಯನ್ನು ಅಧ್ಯಕ್ಷರು ಘೋಷಿಸಿದ್ದಾರೆ.

ಹತ್ತಕ್ಕೂ ಹೆಚ್ಚು ಮಂದಿ ಉಗ್ರರು ಮೋಟರ್‌ಬೈಕ್‌ಗಳಲ್ಲಿ ಆಗಮಿಸಿ ಮುಂಜಾನೆ ಈ ದಾಳಿ ನಡೆಸಿದರು. ವಾಯುಪಡೆ ಪ್ರತಿದಾಳಿ ನಡೆಸಿ ಉಗ್ರರನ್ನು ಹಿಮ್ಮೆಟ್ಟಿಸಲು ಹಲವು ಗಂಟೆಗಳ ಹೋರಾಟ ನಡೆಸಬೇಕಾಯಿತು ಎಂದು ಸೇನೆ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News