ಪರ್ಲ್ ಕೊಲೆ: ದೋಷಿಗಳ ಮರುಬಂಧನಕ್ಕೆ ಪಾಕ್ ಆದೇಶ

Update: 2020-04-03 18:04 GMT

ಕರಾಚಿ, ಎ. 3: ಅಮೆರಿಕದ ಪತ್ರಕರ್ತ ಡೇನಿಯಲ್ ಪರ್ಲ್ ಕೊಲೆ ಪ್ರಕರಣದ ನಾಲ್ವರು ದೋಷಿಗಳನ್ನು ಖುಲಾಸೆಗೊಳಿಸುವ ನ್ಯಾಯಾಲಯವೊಂದರ ಆದೇಶದ ಹೊರತಾಗಿಯೂ, ಅವರ ಜೈಲುವಾಸ ಇನ್ನೂ ಮೂರು ತಿಂಗಳು ಮುಂದುವರಿಯಲಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಶುಕ್ರವಾರ ಘೋಷಿಸಿದ್ದಾರೆ.

ಬ್ರಿಟನ್ ಪ್ರಜೆ ಅಹ್ಮದ್ ಉಮರ್ ಸಯೀದ್ ಶೇಖ್ ಸೇರಿದಂತೆ ಪ್ರಕರಣದ ನಾಲ್ವರು ದೋಷಿಗಳನ್ನು ಸಿಂಧ್ ಪ್ರಾಂತದ ಹೈಕೋರ್ಟ್ ಗುರುವಾರ ಖುಲಾಸೆಗೊಳಿಸಿತ್ತು. ಪರ್ಲ್ ಹತ್ಯೆಯ ಸಂಚು ರೂಪಿಸಿರುವುದಕ್ಕಾಗಿ ಸಯೀದ್ ಶೇಖ್‌ಗೆ 2002ರಲ್ಲಿ ಮರಣ ದಂಡನೆ ವಿಧಿಸಲಾಗಿತ್ತು. ಇತರ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

2001 ಸೆಪ್ಟಂಬರ್ 11ರಂದು ಅಮೆರಿಕದ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ, ಸಿಂಧ್ ರಾಜಧಾನಿ ಕರಾಚಿಯಲ್ಲಿರುವ ಭಯೋತ್ಪಾದಕರ ಬಗ್ಗೆ ‘ವಾಲ್ ಸ್ಟ್ರೀಟ್ ಜರ್ನಲ್’ ವರದಿಗಾರ 38 ವರ್ಷದ ಡೇನಿಯಲ್ ಪರ್ಲ್ ತನಿಖೆ ನಡೆಸುತ್ತಿದ್ದರು. ಅವರನ್ನು 2002 ಜನವರಿಯಲ್ಲಿ ಅಪಹರಿಸಲಾಗಿತ್ತು. ವಾರಗಳ ಬಳಿಕ ಅವರನ್ನು ತಲೆಕಡಿದು ಕೊಲ್ಲಲಾಗಿತ್ತು. ನಾಲ್ವರು ದೋಷಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವ ಮೊದಲು ಅವರನ್ನು ಬಂಧಿಸಿ ಜೈಲಿನಲ್ಲಿಡುವಂತೆ ಸಿಂಧ್ ರಾಜ್ಯದ ಗೃಹ ಸಚಿವಾಲಯ ಆದೇಶ ನೀಡಿದೆ.

ಬಿಡುಗಡೆಗೆ ಅಮೆರಿಕ ಖಂಡನೆ

ಡೇನಿಯಲ್ ಪರ್ಲ್ ಕೊಲೆ ಪ್ರಕರಣದ ದೋಷಿಗಳನ್ನು ಬಿಡುಗಡೆ ಮಾಡುವ ನ್ಯಾಯಾಲಯದ ಆದೇಶವನ್ನು ಅಮೆರಿಕ ಗುರುವಾರ ಖಂಡಿಸಿದೆ. ಇದು ಭಯೋತ್ಪಾದನೆಯ ಎಲ್ಲ ಬಲಿಪಶುಗಳ ಮೇಲೆ ನಡೆದ ದೌರ್ಜನ್ಯವಾಗಿದೆ ಎಂಬುದಾಗಿ ದಕ್ಷಿಣ ಮತ್ತು ಮಧ್ಯ ಏಶ್ಯ ವ್ಯವಹಾರಗಳಿಗಾಗಿನ ಅಮೆರಿಕದ ಸಹಾಯಕ ವಿದೇಶ ಕಾರ್ಯದರ್ಶಿ ಆ್ಯಲಿಸ್ ವೆಲ್ಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News