ಕರಿಯ ವ್ಯಕ್ತಿ ಹತ್ಯೆ: ಪೊಲೀಸ್ ಠಾಣೆಗೆ ಬೆಂಕಿ ಕೊಟ್ಟ ಪ್ರತಿಭಟನಕಾರರು

Update: 2020-05-29 18:19 GMT

ಅಮೆರಿಕ, ಮೇ 29: ಅಮೆರಿಕದ ಮಿನಸೋಟ ರಾಜ್ಯದ ಮಿನಿಪೊಲಿಸ್ ನಗರದಲ್ಲಿ ಕೈಕೋಳದಲ್ಲಿದ್ದ ಕರಿಯ ವ್ಯಕ್ತಿಯೋರ್ವನ ಕುತ್ತಿಗೆ ಮೇಲೆ ಬಿಳಿಯ ಪೊಲೀಸ್ ಅಧಿಕಾರಿಯೊಬ್ಬ ಮೊಣಕಾಲಿಟ್ಟು ಉಸಿರುಗಟ್ಟಿಸಿ ಕೊಂದಿದ್ದಾರೆ ಎನ್ನಲಾದ ಘಟನೆಯ ವಿರುದ್ಧ ಅಮೆರಿಕದಲ್ಲಿ ಹಲವು ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ.

ಗುರುವಾರ ರಾತ್ರಿ ಪ್ರತಿಭಟನಕಾರರು ಮಿನಿಪೊಲಿಸ್ ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚಿದರು. ಅದಕ್ಕೂ ಮೊದಲು ಅಲ್ಲಿನ ಪೊಲೀಸರು ಠಾಣೆಯನ್ನು ತೊರೆದಿದ್ದರು.

ಮೂರು ದಿನಗಳ ಕಾಲ ನಡೆದ ಹಿಂಸಾತ್ಮಕ ಪ್ರತಿಭಟನೆಗಳು ಈಗ ಸಮೀಪದ ಸೇಂಟ್ ಪೌಲ್ ನಗರಕ್ಕೂ ಹಬ್ಬಿದೆ. ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡಾ ಹತ್ಯೆಯನ್ನು ಪ್ರತಿಭಟಿಸಿ ಅಮೆರಿಕದಾದ್ಯಂತ ಜನರು ಬೀದಿಗಿಳಿದಿದ್ದಾರೆ.

ಪ್ರತಿಭಟನಕಾರರು 3ನೇ ಪ್ರೆಸಿಂಕ್ಟ್ ಪೊಲೀಸ್ ಠಾಣೆಯನ್ನು ಗುರಿಯಾಗಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮ ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಠಾಣೆಯನ್ನು ರಾತ್ರಿ 10 ಗಂಟೆಯ ಬಳಿಕ ತೆರವುಗೊಳಿಸಲಾಯಿತು ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದರು.

ಪೊಲೀಸ್ ಠಾಣಾ ಕಟ್ಟಡದೊಳಗೆ ಪ್ರತಿಭಟನಕಾರರು ನುಗ್ಗುವುದನ್ನು ಲೈವ್‌ಸ್ಟ್ರೀಮ್ ವೀಡಿಯೊ ತೋರಿಸಿದೆ.

ಅಮೆರಿಕ ಕಠಿಣ ಕ್ರಮ ತೆಗೆದುಕೊಳ್ಳಲಿ: ವಿಶ್ವಸಂಸ್ಥೆ

ಪೊಲೀಸ್ ಕಸ್ಟಡಿಯಲ್ಲಿ ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡಾ ಮೃತಪಟ್ಟಿರುವ ಘಟನೆಯನ್ನು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮುಖ್ಯಸ್ಥೆ ಮಿಶೆಲ್ ಬ್ಯಾಚಲೆಟ್ ಗುರುವಾರ ಖಂಡಿಸಿದ್ದಾರೆ ಹಾಗೂ ನಿಶ್ಶಸ್ತ್ರಧಾರಿ ಆಫ್ರಿಕನ್ ಅಮೆರಿಕನ್ನರ ಹತ್ಯೆಗಳನ್ನು ನಿಲ್ಲಿಸಲು ಅಮೆರಿಕದ ಅಧಿಕಾರಿಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಅಮೆರಿಕದ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರಿಂದ ಹತ್ಯೆಗೀಡಾಗಿರುವ ಆಫ್ರಿಕನ್ ಅಮೆರಿಕನ್ನರ ಸುದೀರ್ಘ ಪಟ್ಟಿಯಲ್ಲಿ ಫ್ಲಾಯ್ಡಾ ಹೆಸರು ಇತ್ತೀಚಿನದಾಗಿದೆ ಎಂದು ಹೇಳಿಕೆಯೊಂದರಲ್ಲಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News