ಹಾಂಕಾಂಗ್ ನಾಗರಿಕರಿಗೆ ಆಶ್ರಯ ನೀಡಲು ಮುಂದಾದ ಆಸ್ಟ್ರೇಲಿಯ

Update: 2020-07-09 17:55 GMT

ಹಾಂಕಾಂಗ್ ನಾಗರಿಕರಿಗೆ ಆಶ್ರಯ ನೀಡಲು ಮುಂದಾದ ಆಸ್ಟ್ರೇಲಿಯ

ಗಡಿಪಾರು ಒಪ್ಪಂದ ಸ್ಥಗಿತ

ಸಿಡ್ನಿ (ಆಸ್ಟ್ರೇಲಿಯ), ಜು. 9: ಹಾಂಕಾಂಗ್ ನಾಗರಿಕರು ಆಸ್ಟ್ರೇಲಿಯದಲ್ಲಿ ಹೊಸ ಜೀವನವನ್ನು ಆರಂಭಿಸಲು ಸಾಧ್ಯವಾಗುವಂಥ ಹಲವಾರು ಉಪಕ್ರಮಗಳನ್ನು ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್ ಗುರುವಾರ ಘೋಷಿಸಿದ್ದಾರೆ.

 ಹಾಂಕಾಂಗ್ ಪ್ರಜೆಗಳ ವೀಸಾಗಳನ್ನು ಐದು ವರ್ಷಗಳಿಗೆ ವಿಸ್ತಿರಿಸುವುದೂ ಇದರಲ್ಲಿ ಸೇರಿದೆ. ಏಶ್ಯದ ಆರ್ಥಿಕ ವ್ಯವಹಾರಗಳ ಕೇಂದ್ರವಾಗಿರುವ ಹಾಂಕಾಂಗ್ ಮೇಲೆ ಚೀನಾವು ಇತ್ತೀಚೆಗೆ ಕಠಿಣ ರಾಷ್ಟ್ರೀಯ ಭದ್ರತಾ ಕಾನೂನನ್ನು ಹೇರಿದ ಬಳಿಕ ಆಸ್ಟ್ರೇಲಿಯ ಈ ಕ್ರಮಕ್ಕೆ ಮುಂದಾಗಿದೆ.

ಅದೇ ವೇಳೆ, ಹಾಂಕಾಂಗ್ ಜೊತೆಗಿನ ಗಡಿಪಾರು ಒಪ್ಪಂದವನ್ನೂ ಮೊರಿಸನ್ ಅಮಾನತಿನಲ್ಲಿಟ್ಟಿದ್ದಾರೆ. ಹಾಂಕಾಂಗ್ ನ ನೂತನ ಕಾನೂನಿನ ಪ್ರಕಾರ, ಅಲ್ಲಿನ ಆರೋಪಿಗಳನ್ನು ಕಮ್ಯುನಿಸ್ಟ್ ಪಕ್ಷದ ನಿಯಂತ್ರಣದಲ್ಲಿರುವ ನ್ಯಾಯಾಲಯಗಳಲ್ಲಿ ವಿಚಾರಣೆ ಎದುರಿಸುವುದಕ್ಕಾಗಿ ಚೀನಾಕ್ಕೆ ಕಳುಹಿಸಬಹುದಾಗಿದೆ.

ಕಳೆದ ವಾರ ಹಾಂಕಾಂಗ್ ನಲ್ಲಿ ಜಾರಿಗೆ ಬಂದಿರುವ ರಾಷ್ಟ್ರೀಯ ಭದ್ರತಾ ಕಾನೂನು ಸ್ಥಿತಿಗತಿಗಳಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡಿದೆ. ಹಾಗಾಗಿ, ಆಸ್ಟ್ರೇಲಿಯವು ಅದರೊಂದಿಗಿನ ಗಡಿಪಾರು ಒಪ್ಪಂದವನ್ನು ಅಮಾನತಿನಲ್ಲಿಡುವುದು ಎಂದು ಮೊರಿಸನ್ ನುಡಿದರು.

‘‘ಎಲ್ಲಿಯಾದರೂ ಹೊಸ ಜೀವನ ಆರಂಭಿಸುವುದಕ್ಕಾಗಿ ಹೊರ ಹೋಗಲು ಬಯಸುವ, ತಮ್ಮ ಕೌಶಲಗಳನ್ನು ಮತ್ತು ಉದ್ಯಮಗಳನ್ನು ಹೊರಗೆ ಸಾಗಿಸಲು ಬಯಸುವ ಹಾಂಕಾಂಗ್ ಪ್ರಜೆಗಳಿರಬಹುದು’’ ಎಂದು ಮೊರಿಸನ್ ಹೇಳಿದರು.

ಈಗಾಗಲೇ ಆಸ್ಟ್ರೇಲಿಯದಲ್ಲಿರುವ ಹಾಂಕಾಂಗ್ ಪ್ರಜೆಗಳು ಆಸ್ಟ್ರೇಲಿಯದಲ್ಲೇ ಉಳಿಯಲು ಸಹಾಯ ಮಾಡುವ ವೀಸಾ ಉಪಕ್ರಮಗಳನ್ನು ಅವರು ಘೋಷಿಸಿದರು. ಆಸ್ಟೇಲಿಯದಲ್ಲಿ ಪದವಿ ಪಡೆಯುವ ಹಾಂಕಾಂಗ್ ವಿದ್ಯಾರ್ಥಿಗಳು ಆಸ್ಟ್ರೇಲಿಯದಲ್ಲೇ 5 ವರ್ಷ ಉಳಿಯುವ ಅವಕಾಶವನ್ನು ಪಡೆಯುತ್ತಾರೆ ಹಾಗೂ ಬಳಿಕ ಅವರು ಖಾಯಂ ವಾಸ್ತವ್ಯಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಮೊರಿಸನ್ ಹೇಳಿದರು.

ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ: ಚೀನಾ

ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್ ರ ಉಪಕ್ರಮಗಳನ್ನು ಖಂಡಿಸಿರುವ ಆಸ್ಟ್ರೇಲಿಯದಲ್ಲಿರುವ ಚೀನಾದ ರಾಯಭಾರ ಕಚೇರಿಯು, ‘‘ಅದು ಅಂತಾರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆಯಾಗಿದೆ ಹಾಗೂ ಚೀನಾದ ಆಂತರಿಕ ವ್ಯವಹಾರಗಳಲ್ಲಿ ಆಸ್ಟ್ರೇಲಿಯ ನಡೆಸುತ್ತಿರುವ ಹಸ್ತಕ್ಷೇಪವಾಗಿದೆ’’ ಎಂದು ಹೇಳಿದೆ.

ಚೀನಾವು ಆಸ್ಟ್ರೇಲಿಯದ ಆಧಾರರಹಿತ ಆರೋಪಗಳು ಮತ್ತು ಉಪಕ್ರಮಗಳನ್ನು ಬಲವಾಗಿ ಖಂಡಿಸುತ್ತದೆ ಹಾಗೂ ವಿರೋಧಿಸುತ್ತದೆ’’ ಎಂದು ಚೀನಾ ರಾಯಭಾರ ಕಚೇರಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News