ಚಲನಚಿತ್ರ ಪೈರಸಿಯ ಮಾಹಿತಿಯನ್ನು ಯೂಟ್ಯೂಬ್ ನೀಡಬೇಕೆಂದಿಲ್ಲ

Update: 2020-07-09 18:17 GMT

ಬ್ರಸೆಲ್ಸ್ (ಬೆಲ್ಜಿಯಮ್), ಜು. 9: ತನ್ನ ವೀಡಿಯೊ ಪ್ಲಾಟ್ ಫಾರಂಗೆ ಸಿನೆಮಾಗಳನ್ನು ಅಕ್ರಮವಾಗಿ ಅಪ್ಲೋಡ್ ಮಾಡುವ ಬಳಕೆದಾರರ ಇಮೇಲ್ ಅಥವಾ ಐಪಿ ವಿಳಾಸವನ್ನು ಗೂಗಲ್ ಕಂಪೆನಿಯ ಯೂಟ್ಯೂಬ್ ನೀಡಬೇಕಾಗಿಲ್ಲ ಎಂದು ಯುರೋಪ್ ನ ಉನ್ನತ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ. ವೈಯಕ್ತಿಕ ಮಾಹಿತಿ ರಕ್ಷಣೆ ಮತ್ತು ಕಾಪಿರೈಟ್ ನಡುವೆ ಸಮತೋಲನವಿರಬೇಕಾಗಿದೆ ಎಂದು ಅದು ಹೇಳಿದೆ.

ಜರ್ಮನಿಯ ಚಿತ್ರ ವಿತರಕ ಸಂಸ್ಥೆ ಕಾನ್ಸ್ಟಾಂಟಿನ್ ಫಿಲ್ಮ್ ವೆರ್ಲೀಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ, ಚಲನಚಿತ್ರ ಪೈರಸಿಯ ವಿರುದ್ಧ ಹೋರಾಡಲು ವೀಡಿಯೊ ಪ್ಲಾಟ್ ಫಾರಂಗಳು ಏನು ಮಾಡಬೇಕು ಎಂಬ ವಿಷಯದಲ್ಲಿ ಜರ್ಮನಿಯ ನ್ಯಾಯಾಲಯವೊಂದು ಮಾರ್ಗದರ್ಶನ ಕೋರಿರುವ ಹಿನ್ನೆಲೆಯಲ್ಲಿ ಲಕ್ಸಂಬರ್ಗ್ ನಲ್ಲಿರುವ ಐರೋಪ್ಯ ಒಕ್ಕೂಟ ನ್ಯಾಯಾಲಯವು ಈ ಆದೇಶ ನೀಡಿದೆ.

ಜರ್ಮನಿಯಲ್ಲಿ ‘ಸ್ಕ್ಯಾರಿ ಮೂವೀ 5’ ಮತ್ತು ‘ಪಾರ್ಕರ್’ ಚಿತ್ರಗಳ ವಿತರಣೆ ಹಕ್ಕುಗಳನ್ನು ಹೊಂದಿರುವ ಕಂಪೆನಿಯು, 2013 ಮತ್ತು 2014ರಲ್ಲಿ ಈ ಚಿತ್ರಗಳನ್ನು ಅಕ್ರಮವಾಗಿ ಯುಟ್ಯೂಬ್ ಗೆ ಹಾಕಿದ ಬಳಕೆದಾರರ ಇಮೇಲ್ ವಿಳಾಸಗಳು, ಟೆಲಿಫೋನ್ ನಂಬರ್ ಗಳು ಮತ್ತು ಐಪಿ ಎಡ್ರಸ್ ಗಳನ್ನು ನೀಡುವಂತೆ ಯೂಟ್ಯೂಬ್ ಮತ್ತು ಗೂಗಲ್ ಗೆ ಮನವಿ ಮಾಡಿತ್ತು.

ಈ ವಿವರಗಳನ್ನು ನೀಡಿದವರ ವಿವರಗಳನ್ನು ಅವು ನೀಡಲು ನಿರಾಕರಿಸಿದ ಬಳಿಕ ಕಾನ್ಸ್ಟಾಂಟಿನ್ ಫಿಲ್ಮ್ ವೆರ್ಲೀಯು ಅವುಗಳ ವಿರುದ್ಧ ಜರ್ಮನಿಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತ್ತು. ಈಗ ಐರೋಪ್ಯ ಒಕ್ಕೂಟ ನ್ಯಾಯಾಲಯವು ಈ ಜಾಗತಿಕ ತಂತ್ರಜ್ಞಾನ ಕಂಪೆನಿಗಳ ಪರವಾಗಿ ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News