‘ಸಮುದಾಯ ರೋಗ ನಿರೋಧತೆ’ ಇನ್ನೂ ಬಹು ದೂರ

Update: 2020-07-25 17:45 GMT

ಲಂಡನ್, ಜು. 25: ‘ಸಮುದಾಯ ರೋಗ ನಿರೋಧತೆ’ (ಕೋವಿಡ್-19ಕ್ಕೆ ಹೆಚ್ಚಿನ ಜನರು ತಮ್ಮ ರಕ್ತದಲ್ಲಿ ಪ್ರತಿಕಾಯಗಳನ್ನು ಬೆಳೆಸಿಕೊಳ್ಳುವುದು) ಇನ್ನೂ ಬಹುದೂರದ ಕಲ್ಪನೆಯಾಗಿದೆ ಹಾಗೂ ಲಸಿಕೆಯೊಂದು ಬಂದ ಬಳಿಕ ಅದು ಸಾಕಾರಗೊಳ್ಳಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಶುಕ್ರವಾರ ಎಚ್ಚರಿಸಿದ್ದಾರೆ.

ಸಹಜ ರೋಗನಿರೋಧತೆಯ ಹಂತಕ್ಕೆ ಬರಲು ಸೋಂಕಿನ ಹಲವು ಅಲೆಗಳ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಜಿನೀವದಿಂದ ಏರ್ಪಡಿಸಿದ ಸಾಮಾಜಿಕ ಜಾಲತಾಣ ನೇರಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೇಳಿದರು. ಹಾಗಾಗಿ, ಕನಿಷ್ಠ ಇನ್ನೊಂದು ವರ್ಷ ನೋವೆಲ್-ಕೊರೋನ ವೈರಸ್‌ನಿಂದ ದೂರವಿರಲು ಸಾಧ್ಯವಿರುವುದನ್ನೆಲ್ಲ ಮಾಡಲು ಜಗತ್ತು ಸಿದ್ಧವಾಗಿರಬೇಕು ಎಂದು ಅವರು ಎಚ್ಚರಿಸಿದರು. ಈ ಅವಧಿಯಲ್ಲಿ ವಿಜ್ಞಾನಿಗಳು ಲಸಿಕೆಯ ಸಂಶೋಧನೆಯಲ್ಲಿ ತೊಡಗಿರುತ್ತಾರೆ ಎಂದರು.

‘‘ಸಮುದಾಯ ರೋಗ ನಿರೋಧತೆಯ ಕಲ್ಪನೆ ಸಾಕಾರಗೊಳ್ಳಲು ಜನಸಂಖ್ಯೆಯ 50ರಿಂದ 60 ಶೇಕಡ ಮಂದಿ ರೋಗನಿರೋಧಕ ಶಕ್ತಿಯನ್ನು ಹೊಂದಿರಬೇಕು. ಆಗ ಸೋಂಕು ಹರಡುವಿಕೆಯ ಸರಪಳಿಯನ್ನು ಮುರಿಯಬಹುದು’’ ಎಂದು ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News