×
Ad

ಮಾರ್ಟಿನೀಕ್‌ನಲ್ಲಿ ನೆಪೋಲಿಯನ್ ರಾಣಿಯ ಪ್ರತಿಮೆ ಕೆಡವಿದ ಹೋರಾಟಗಾರರು

Update: 2020-07-27 23:16 IST
ಪೋಟೊ ಕೃಪೆ: histoirefrance2

ಫೋರ್ಟ್-ಡಿ-ಫ್ರಾನ್ಸ್ (ಫ್ರಾನ್ಸ್), ಜು. 27: ಫ್ರಾನ್ಸ್‌ನ ಸಾಗರೋತ್ತರ ಭೂಭಾಗವಾಗಿರುವ ಮಾರ್ಟಿನೀಕ್‌ನಲ್ಲಿ ಜನಾಂಗೀಯ ತಾರತಮ್ಯ ವಿರೋಧಿ ಹೋರಾಟಗಾರರು ದೊರೆ ನೆಪೋಲಿಯನ್‌ನ ರಾಣಿ ಜೋಸೆಫೀನ್ ಮತ್ತು ಇನ್ನೊಂದು ವಸಾಹತುಶಾಹಿ ವ್ಯಕ್ತಿಯ ಪ್ರತಿಮೆಗಳನ್ನು ಕೆಡವಿದ್ದಾರೆ.

ವಿವಾದಾಸ್ಪದ ಸ್ಮಾರಕಗಳನ್ನು ಕೆಡವದಿರಲು ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಇದು ಸವಾಲಾಗಿದೆ.

ಕೆರಿಬಿಯನ್ ದ್ವೀಪ ಸಮೂಹದ ಭಾಗವಾಗಿರುವ ಮಾರ್ಟಿನೀಕ್ ದ್ವೀಪದಲ್ಲಿ ಶ್ರೀಮಂತ ವಸಾಹತುಶಾಹಿ ಕುಟುಂಬದಲ್ಲಿ ಹುಟ್ಟಿದ ಜೋಸೆಫೀನ್ ಡಿ ಬೋಹರ್ನೇಸ್ ಬಳಿಕ ನೆಪೋಲಿಯನ್‌ನ ಮೊದಲನೆ ಪತ್ನಿ ಹಾಗೂ ಸಾಮ್ರಾಜ್ಞಿಯಾದಳು. ಆಕೆಯ ಪ್ರತಿಮೆಯನ್ನು ದೊಣ್ಣೆ ಮತ್ತು ಹಗ್ಗಗಳೊಂದಿಗೆ ಬಂದ ಪ್ರತಿಭಟನಕಾರರು ನೆಲಕ್ಕೆ ಕೆಡವಿದರು ಎಂದು ದ್ವೀಪದ ರಾಜಧಾನಿ ಫೋರ್ಟ್-ಡಿ-ಫ್ರಾನ್ಸ್‌ನಲ್ಲಿರುವ ಎಎಫ್‌ಪಿ ಸುದ್ದಿಸಂಸ್ಥೆಯ ಪತ್ರಕರ್ತರೊಬ್ಬರು ರವಿವಾರ ವರದಿ ಮಾಡಿದ್ದಾರೆ.

ಫ್ರಾನ್ಸ್ ಕ್ರಾಂತಿಯ ಹಿನ್ನೆಲೆಯಲ್ಲಿ ಗುಲಾಮಗಿರಿ ನಿಷೇಧಿಸಲ್ಪಟ್ಟ 8 ವರ್ಷಗಳ ಬಳಿಕ, ದೊರೆ ನೆಪೋಲಿಯನ್ 1802ರಲ್ಲಿ ಫ್ರಾನ್ಸ್‌ನ ವಸಾಹತುಗಳಲ್ಲಿ ಗುಲಾಮಗಿರಿಯನ್ನು ಮರುಜಾರಿಗೆ ತಂದನು.

ಜೋಸೆಫೀನ್ ಪ್ರತಿಮೆಯ ತಲೆಯನ್ನು ಸುಮಾರು 30 ವರ್ಷಗಳ ಹಿಂದೆಯೇ ತುಂಡರಿಸಲಾಗಿತ್ತು ಹಾಗೂ ಅದನ್ನು ದುರಸ್ತಿ ಮಾಡಿರಲಿಲ್ಲ.

ಈ ಪ್ರತಿಮೆಯಿಂದ ಸ್ವಲ್ಪವೇ ದೂರದಲ್ಲಿರುವ ವ್ಯಾಪಾರಿ ಪಿಯರ್ ಬೆಲೈನ್ ಡಿ’ಎಸ್ನಂಬಕ್ ಎಂಬಾತನ ಪ್ರತಿಮೆಯನ್ನೂ ಕಾರ್ಯಕರ್ತರು ಕೆಡವಿದರು. ಈ ವ್ಯಾಪಾರಿಯು 1635ರಲ್ಲಿ ಮಾರ್ಟಿನೀಕ್‌ನಲ್ಲಿ ಮೊದಲ ಫ್ರೆಂಚ್ ವಸಾಹತನ್ನು ಸ್ಥಾಪಿಸಿದ್ದನು.

ಇಂಥ ವಸಾಹತುಶಾಹಿ ಪ್ರತಿಮೆಗಳನ್ನು ರವಿವಾರದ ಒಳಗೆ ಕೆಡವದಿದ್ದರೆ ಅವುಗಳನ್ನು ನಾವೇ ಕೆಡಹುವುದಾಗಿ ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ವೀಡಿಯೊವೊಂದರಲ್ಲಿ ಕಾರ್ಯಕರ್ತರು ಎಚ್ಚರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News