ವಿದೇಶಗಳಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆ

Update: 2020-08-15 18:16 GMT

ಭಾರತದ 74ನೇ ಸ್ವಾತಂತ್ರ ದಿನಾಚರಣೆಯ ಹಿನ್ನೆಲೆಯಲ್ಲಿ ಶನಿವಾರ ವಿಶ್ವದಾದ್ಯಂತದ ಭಾರತೀಯರು ತ್ರಿವರ್ಣ ಧ್ವಜ ಅರಳಿಸಿ, ರಾಷ್ಟ್ರಗೀತೆ ಮತ್ತು ದೇಶಭಕ್ತಿ ಗೀತೆ ಹಾಡಿದರು.

 ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಮಾಸ್ಕ್ ಧಾರಣೆ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಮೂಲಕ ಶಿಷ್ಟಾಚಾರವನ್ನು ಪಾಲಿಸಿದರು ಎಂದು ವರದಿಯಾಗಿದೆ.

ನ್ಯೂಝಿಲ್ಯಾಂಡ್, ಆಸ್ಟ್ರೇಲಿಯಾ, ಇಂಡೋನೇಶ್ಯಾ , ಸಿಂಗಾಪುರ, ಚೀನಾ, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಯುಎಇ, ಇಸ್ರೇಲ್ ಹಾಗೂ ಇತರ ಹಲವು ದೇಶಗಳಲ್ಲಿ ನೆಲೆಸಿರುವ ಭಾರತೀಯರು ಭಾರತದ ತ್ರಿವರ್ಣ ಧ್ವಜ ಅರಳಿಸಿ ಸಂಭ್ರಮಿಸಿದರು. ಬೀಜಿಂಗ್‌ನಲ್ಲಿ ರಾಯಭಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ರಾಯಭಾರಿ ವಿಕ್ರಮ್ ಮಿಸ್ರಿ ಭಾರತದ ತ್ರಿವರ್ಣ ಧ್ವಜವನ್ನು ಅರಳಿಸಿದರು. ಬೀಜಿಂಗ್‌ನಲ್ಲಿ ನೆಲೆಸಿರುವ ಭಾರತೀಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸ್ವಾತಂತ್ರ ದಿನಾಚರಣೆ ಮುನ್ನಾದಿನ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾಡಿದ್ದ ಭಾಷಣವನ್ನು ಮಿಸ್ರಿ ಓದಿ ಹೇಳಿದರು. ಬ್ರಿಟನ್‌ನಲ್ಲಿ ಭಾರತದ ರಾಯಭಾರಿ ಗಾಯತ್ರಿ ಇಸ್ಸಾರ್ ಕುಮಾರ್ ರಾಷ್ಟ್ರಧ್ವಜ ಅರಳಿಸಿದರು. ಹೈಕಮಿಷನ್‌ನ ರಾಜತಾಂತ್ರಿಕ ಸಿಬಂದಿಗಳು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು. ಭಾರತದ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಇಸ್ರೇಲ್‌ನ ಅಧ್ಯಕ್ಷ ರ್ಯೂವನ್ ರಿವ್ಲಿನ್ ಮತ್ತು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಭಿನಂದನೆ ಸಲ್ಲಿಸಿದ್ದಾರೆ.

ಇಸ್ರೇಲ್‌ನ ಭಾರತದ ರಾಯಭಾರ ಕಚೇರಿಯಲ್ಲಿ ಭಾರತದ ರಾಯಭಾರಿ ಸಂಜೀವ್ ಸಿಂಗ್ಲ ತ್ರಿವರ್ಣ ಧ್ವಜ ಅರಳಿಸಿ, ರಾಷ್ಟ್ರಪತಿಯವರ ಭಾಷಣವನ್ನು ಓದಿದರು. ಅಲ್ಲದೆ ರಾಯಭಾರ ಕಚೇರಿಯ ಅಧಿಕೃತ ವೆಬ್‌ಸೈಟ್‌ನಲ್ಲಿ, ಹೊಸದಿಲ್ಲಿಯಲ್ಲಿ ನಡೆದ ಭಾರತದ ಸ್ವಾತಂತ್ರ ದಿನಾಚರಣೆಯ ನೇರ ಪ್ರಸಾರ ಮಾಡಲಾಗಿತ್ತು. ಸಿಂಗಾಪುರಕ್ಕೆ ನೂತನವಾಗಿ ನೇಮಕವಾದ ಭಾರತದ ಹೈಕಮಿಷನರ್ (ನಿಯೋಜಿತ) ಪಿ ಕುಮಾರನ್‌ಗೆ ಫೇಸ್‌ಬುಕ್‌ನಲ್ಲಿ ನೇರಪ್ರಸಾರವಾದ ಕಾರ್ಯಕ್ರಮದಲ್ಲಿ ಅಲ್ಲಿನ ಭಾರತೀಯರು ಹಾಗೂ ಶಾಲಾ ಮಕ್ಕಳು ಶುಭಾಷಯ ಸಲ್ಲಿಸಿದರು. ಬಳಿಕ ಕುಮಾರನ್ ತ್ರಿವರ್ಣ ಧ್ವಜ ಅರಳಿಸಿ, ರಾಷ್ಟ್ರಪತಿಯವರ ಭಾಷಣವನ್ನು ಓದಿದರು.

  ಪಾಕಿಸ್ತಾನದ ಇಸ್ಲಮಾಬಾದ್‌ನಲ್ಲಿ ಭಾರತದ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ರಾಯಭಾರ ಕಚೇರಿಯನ್ನು ದೀಪಗಳಿಂದ ಅಲಂಕರಿಸಲಾಗಿತ್ತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಭಾರತದ ಹೈಕಮಿಷನರ್ ತ್ರಿವರ್ಣ ಧ್ವಜವನ್ನು ಅರಳಿಸಿದರು. ನ್ಯೂಝಿಲ್ಯಾಂಡ್‌ನಲ್ಲಿ ‘ಇಂಡಿಯನ್ ಅಸೋಸಿಯೇಷನ್ ವೆಲಿಂಗ್ಟನ್’ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಹೈಕಮಿಷನರ್ ಮುಕ್ತೇಶ್ ಪರ್ದೇಸಿ ಅವರು ತ್ರಿವರ್ಣ ಧ್ವಜ ಅರಳಿಸಿ ಮಹಾತ್ಮಾ ಗಾಂಧೀಜಿಯವರಿಗೆ ಗೌರವ ನಮನ ಸಲ್ಲಿಸಿದರು. ಬಳಿಕ ಅಪ್ರತಿಮ ಸಮುದಾಯ ಸೇವೆ ಸಲ್ಲಿಸಿದ ವ್ಯಕ್ತಿಗಳು/ ಸಂಘಟನೆಗಳಿಗೆ ಪ್ರಮಾಣ ಪತ್ರ ವಿತರಿಸಿದರು.

 ನೇಪಾಳದ ಕಠ್ಮಂಡು, ಶ್ರೀಲಂಕಾದ ಕೊಲಂಬೊ, ಯುಎಇಯ ಅಬುಧಾಬಿ, ಆಸ್ಟ್ರೇಲಿಯಾದ ಮೆಲ್ಬೋರ್ನ್, ಇಂಡೋನೇಶ್ಯಾದ ಜಕಾರ್ತ, ಬಾಂಗ್ಲಾದೇಶದ ಢಾಕಾದಲ್ಲೂ ಭಾರತದ ಸ್ವಾತಂತ್ರ ದಿನಾಚರಣೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News