ಪತ್ನಿ, ತಾಯಿ ಹತ್ಯೆಗೈದ ಭಾರತದ ಮಾಜಿ ಶಾಟ್‌ಪುಟ್ ಪಟು ಅಮೆರಿಕದಲ್ಲಿ ಬಂಧನ

Update: 2020-08-26 06:31 GMT

ವಾಶಿಂಗ್ಟನ್, ಆ.26:ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿರುವ ಮಾಜಿ ಶಾಟ್‌ಪುಟ್ ಕ್ರೀಡಾಪಟು ಇಕ್ಬಾಲ್ ಸಿಂಗ್ ವಿರುದ್ಧ ಅಮೆರಿಕದಲ್ಲಿ ಹತ್ಯೆ ಪ್ರಕರಣ ದಾಖಲಾಗಿದೆ. ಸಿಂಗ್ ತಾನು ಪತ್ನಿ ಹಾಗೂ ತಾಯಿಯನ್ನು ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪೆನ್ಸಿಲ್ವೇನಿಯಾದ ಡೆಲವೇರ್ ಕೌಂಟಿಯಲ್ಲಿ ನೆಲೆಸಿರುವ 62 ವಯಸ್ಸಿನ ಸಿಂಗ್ ತನ್ನ ಅಪರಾಧವನ್ನು ಒಪ್ಪಿಕೊಳ್ಳಲು ರವಿವಾರ ಬೆಳಗ್ಗೆ ಪೊಲೀಸರಿಗೆ ಕರೆ ಮಾಡಿದ್ದಾನೆೆ ಎಂದು ಫಿಲಡೆಲ್ಫಿಯಾ ಇನ್‌ಸ್ಪೆಕ್ಟರ್ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ನ್ಯೂ ಟೌನ್ ಟೌನ್‌ಶಿಪ್‌ನಲ್ಲಿರುವ ಸಿಂಗ್ ಮನೆಗೆ ಪೊಲೀಸರು ತೆರಳಿದಾಗ ಸಿಂಗ್ ಮೈಯಲ್ಲಾ ರಕ್ತವಾಗಿತ್ತು. ಸ್ವಯಂಪ್ರೇರಿತ ಇರಿತದ ಗಾಯದಿಂದ ಬಳಲುತ್ತಿದ್ದರು. ಒಳಗೆ ಇಬ್ಬರು ಮಹಿಳೆಯರ ಶವ ಇದ್ದವು ಎಂದು ವರದಿಯಾಗಿದೆ. ಸಿಂಗ್ ವಿರುದ್ಧ ಸೋಮವಾರ ಮೊದಲ ಹಾಗೂ ತೃತೀಯ ಹಂತದ ಹತ್ಯೆ ಪ್ರಕರಣ ದಾಖಲಾಗಿರುವುದು ದಾಖಲೆಯಿಂದ ಗೊತ್ತಾಗಿದ್ದು, ಸಿಂಗ್‌ನನ್ನು ಕಸ್ಟಡಿಯಲ್ಲಿಡಲಾಗಿದೆ. ಆರೋಪಗಳ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಜಾಮೀನು ನಿರಾಕರಿಸಲಾಗಿದೆ.ಸಿಂಗ್ ಟ್ಯಾಕ್ಸಿಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ಅಮೆರಿಕದ ಮಾಧ್ಯಮಗಳು ತಿಳಿಸಿವೆ.

ರಾಕ್‌ವುಡ್ ರಸ್ತೆಯಲ್ಲಿರುವ ಸಿಂಗ್ ಮನೆಯಲ್ಲಿ ಆತನ ತಾಯಿ ನಾಸಿಬ್ ಕೌರ್ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ರಕ್ತ ಮಡುವಿನಲ್ಲಿ ಬಿದ್ದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಸಿಂಗ್ ಪತ್ನಿ ಜಸ್ಪಾಲ್ ಕೌರ್ ಅವರನ್ನು ಇದೇ ರೀತಿ ಕೊಲೆಗೈಯ್ಯಲಾಗಿರುವುದು ಕಂಡುಬಂದಿದೆ. ಸಿಂಗ್ ಬಂಧನಕ್ಕೆ ಕಾರಣವಾಗಿರುವ ಅಫಿಡವಿಟ್ ಪ್ರಕಾರ ಇಬ್ಬರು ಮಹಿಳೆಯರು ಸ್ಥಳದಲ್ಲಿ ಸಾವನ್ನಪ್ಪಿದ್ದರು.

 ಮಾಜಿ ಶಾಟ್‌ಪುಟ್ ಪಟುವಾಗಿರುವ ಸಿಂಗ್ 1983ರಲ್ಲಿ ಕುವೈತ್‌ನಲ್ಲಿ ನಡೆದಿದ್ದ ಏಶ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಸಿಂಗ್ ಅಮೆರಿಕಕ್ಕೆ ತೆರಳುವ ಮೊದಲು ಇದು ಅವರ ಕ್ರೀಡಾ ಜೀವನದ ದೊಡ್ಡ ಸಾಧನೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News