'ಕೋಮಾ'ದಲ್ಲಿದ್ದಾರೆಂಬ ವದಂತಿ ನಡುವೆ ಕಿಮ್ ಸಭೆ ನಡೆಸುತ್ತಿರುವ ಚಿತ್ರಗಳನ್ನು ಬಿಡುಗಡೆಗೊಳಿಸಿದ ಉತ್ತರ ಕೊರಿಯಾ

Update: 2020-08-26 10:49 GMT

ಪ್ಯೊಂಗ್ಯಾಂಗ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್-ಉನ್ ಕೋಮಾದಲ್ಲಿದ್ದಾರೆಂದು ದಕ್ಷಿಣ ಕೊರಿಯಾದ ರಾಜತಾಂತ್ರಿಕ ಅಧಿಕಾರಿಯೊಬ್ಬರು ಹೇಳಿದ ಕೆಲವೇ ದಿನಗಳಲ್ಲಿ ಉತ್ತರ ಕೊರಿಯಾದ ಆಡಳಿತ  ಅವರ ಚಿತ್ರಗಳನ್ನು ಬಿಡುಗಡೆಗೊಳಿಸಿದೆ. ತಮ್ಮ ವರ್ಕರ್ಸ್ ಪಾರ್ಟಿಯ ಉನ್ನತ ಸಭೆಯೊಂದರಲ್ಲಿ ಕಿಮ್ ಜೊಂಗ್ ಉನ್ ಭಾಗವಹಿಸಿದ ಚಿತ್ರಗಳು ಇವಾಗಿವೆ ಎಂದು ಅಲ್ಲಿನ ಸರಕಾರಿ ನಿಯಂತ್ರಿತ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜನ್ಸಿ ತಿಳಿಸಿದೆ. 

ಸಭೆಯಲ್ಲಿ ಅವರು ಕೊರೋನವೈರಸ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಹಾಗೂ ಚಂಡಮಾರುತ ಸಂಬಂಧ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು ಎಂದು ಆ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಈ ಚಿತ್ರಗಳನ್ನು ಯಾವಾಗ ತೆಗೆಯಲಾಗಿದೆ ಎಂಬ ಕುರಿತು ಸ್ಪಷ್ಟತೆಯಿಲ್ಲ.

ಕಿಮ್ ಅವರು ಎಪ್ರಿಲ್ ತಿಂಗಳಿನಿಂದ ಕೋಮಾದಲ್ಲಿದ್ದಾರೆಂದು  ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ಕಿಮ್ ಡೇ-ಜುಂಗ್ ಅವರ ಮಾಜಿ ಸಹಾಯಕ ಚಂಗ್ ಸೊಂಗ್ ಮಿನ್ ಅವರು ಹೇಳಿದ ಎರಡೇ ದಿನದಲ್ಲಿ ಈ ಚಿತ್ರಗಳು ಬಿಡುಗಡೆಗೊಂಡಿವೆ.

ಆದರೆ ಚಂಗ್ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ``ಕಿಮ್ ಕೋಮಾದಲ್ಲಿದ್ದಾರೆ ಆದರೆ ಇನ್ನೂ ಬದುಕಿದ್ದಾರೆ, ನಕಲಿ ಚಿತ್ರಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ, ಅವರಿಗೆ ಯಾರು ಉತ್ತರಾಧಿಕಾರಿ ಎಂಬ ಕುರಿತು ಸ್ಪಷ್ಟತೆಯಿಲ್ಲದೇ ಇರುವುದರಿಂದ ಹಾಗೂ ಹೆಚ್ಚು ಕಾಲ ಈ ರೀತಿ ರಹಸ್ಯ ಕಾಪಾಡಲು ಸಾಧ್ಯವಿಲ್ಲದೇ ಇರುವುದರಿಂದ ಅವರ ಸೋದರಿ ಕಿಮ್-ಯೊ-ಜುಂಗ್ ಅವರನ್ನು ಪ್ರಧಾನ ವೇದಿಕೆಗೆ  ತರುವ ಯತ್ನಗಳು ನಡೆಯುತ್ತಿವೆ,'' ಎಂದು ಬರೆದಿದ್ದರು.

ಮೂಲಗಳ ಪ್ರಕಾರ ಕಿಮ್ ಜೊಂಗ್-ಉನ್ ಅವರು ತಮ್ಮ ಬಾಡಿ-ಡಬಲ್ ಬಳಸುತ್ತಿರಬಹುದು ಏಕೆಂದರೆ ಇತ್ತೀಚೆಗೆ ಬಿಡುಗಡೆಗೊಳಿಸಲಾದ ಹಲವು ಚಿತ್ರಗಳಿಗೂ ಅವರ ಮೂಲ ಚಿತ್ರಗಳಿಗೂ ವ್ಯತ್ಯಾಸ ಕಾಣುತ್ತಿವೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News