ಕೆನೋಶ: ಪ್ರತಿಭಟನಕಾರರ ಮೇಲೆ ಗುಂಡು ಓರ್ವ ಸಾವು, ಇಬ್ಬರಿಗೆ ಗಾಯ

Update: 2020-08-26 16:54 GMT

 ಕೆನೋಶ (ಅಮೆರಿಕ), ಆ. 26: ಇತ್ತೀಚೆಗೆ ಅಮೆರಿಕದ ವಿಸ್ಕೋನ್ಸಿನ್ ರಾಜ್ಯದ ಕೆನೋಶ ನಗರದಲ್ಲಿ ಕರಿಯ ವ್ಯಕ್ತಿಯೊಬ್ಬರ ಬೆನ್ನಿಗೆ ಪೊಲೀಸರು ಮನಬಂದಂತೆ ಗುಂಡು ಹಾರಿಸಿರುವುದನ್ನು ವಿರೋಧಿಸಿ ಕೆನೋಶ ನಗರದಲ್ಲಿ ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ತಂಡವೊಂದು ಗುಂಡಿನ ದಾಳಿ ನಡೆಸಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಗುಂಡು ಹಾರಾಟದ ಸದ್ದು ಕೇಳುತ್ತಿರುವಂತೆಯೇ ಜನರು ಕೆನೋಶ ನಗರದ ರಸ್ತೆಗಳಲ್ಲಿ ದಿಕ್ಕಾಪಾಲಾಗಿ ಓಡುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವೀಡಿಯೊಗಳು ತೋರಿಸಿವೆ. ಗಾಯಗೊಂಡ ಜನರು ರಸ್ತೆಯಲ್ಲಿ ಬಿದ್ದಿರುವುದನ್ನೂ ವೀಡಿಯೊಗಳು ತೋರಿಸಿವೆ.

‘‘ಮೂವರ ಮೇಲೆ ಗುಂಡು ಹಾರಿಸಲಾಗಿದೆ ಹಾಗೂ ಈ ಪೈಕಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ’’ ಎಂದು ಕೆನೋಶ ಕೌಂಟಿಯ ಶೆರಿಫ್ ಡೇವಿಡ್ ಬೆತ್ ತಿಳಿಸಿರುವುದಾಗಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ರವಿವಾರ ಕೆನೋಶದ ಬಿಳಿಯ ಪೊಲೀಸ್ ಅಧಿಕಾರಿಯೊಬ್ಬರು ಜಾಕೋಬ್ ಬ್ಲೇಕ್‌ಗೆ ಏಳು ಬಾರಿ ಗುಂಡು ಹಾರಿಸುವುದನ್ನು ತೋರಿಸುವ ವೀಡಿಯೊವೊಂದನ್ನು ನೋಡಿದ ಬಳಿಕ ಆಕ್ರೋಶಗೊಂಡ ನೂರಾರು ಜನರು, ಪ್ರತಿಭಟನೆಯ ಮೂರನೇ ರಾತ್ರಿಯಾದ ಮಂಗಳವಾರ ಮೆರವಣಿಗೆಯಲ್ಲಿ ತೊಡಗಿದ್ದಾಗ ಗುಂಡು ಹಾರಾಟ ಸಂಭವಿಸಿದೆ.

ಬ್ಲೇಕ್‌ರ ಮೂವರ ಮಕ್ಕಳು ಕಾರಿನಲ್ಲಿದ್ದು, ಅವರು ಕಾರಿಗೆ ಹತ್ತಲು ಯತ್ನಿಸುತ್ತಿದ್ದಾಗ ಪೊಲೀಸರು ಅವರ ಬೆನ್ನಿಗೆ ಗುಂಡು ಹಾರಿಸಿದ್ದರು.

ಭಾರೀ ಶಸ್ತ್ರಸಜ್ಜಿತರಾಗಿದ್ದ ಬಿಳಿಯರ ಒಂದು ಸಣ್ಣ ಗುಂಪು ಮಂಗಳವಾರ ರಾತ್ರಿ ನಗರದಲ್ಲಿತ್ತು. ಪೆಟ್ರೋಲ್ ಪಂಪೊಂದನ್ನು ರಕ್ಷಿಸಲು ನಿಯೋಜಿಸಲ್ಪಟ್ಟಿದ್ದ ಮಾಫಿಯ ತಂಡ ಮತ್ತು ಪ್ರತಿಭಟನಕಾರರ ನಡುವೆ ನಡೆದ ಸಂಘರ್ಷದ ಫಲ ಈ ಗುಂಡು ಹಾರಾಟವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಇದಕ್ಕೂ ಮೊದಲು, ಪ್ರತಿಭಟನಕಾರರ ಒಂದು ಗುಂಪು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆಯಿತು. ಪ್ರತಿಭಟನಕಾರರು ಪೊಲೀಸರತ್ತ ಪಟಾಕಿಗಳನ್ನು ಎಸೆದರೆ, ಅವರನ್ನು ಚದುರಿಸಲು ಪೊಲೀಸರು ರಬ್ಬರ್ ಗುಂಡುಗಳನ್ನು ಹಾರಿಸಿದರು.

ಬ್ಲೇಕ್ ಸಾವು-ಬದುಕಿನ ಹೋರಾಟದಲ್ಲಿ: ಕುಟುಂಬ

 ವಿಸ್ಕೋನ್ಸಿನ್ ರಾಜ್ಯದ ಕೆನೋಶ ನಗರದಲ್ಲಿ ಪೊಲೀಸರ ಗುಂಡೇಟಿಗೆ ಒಳಗಾಗಿರುವ ಕರಿಯ ವ್ಯಕ್ತಿ ಪಕ್ಷವಾತಕ್ಕೊಳಗಾಗಿದ್ದು, ‘ಸಾವು ಬದುಕಿನ ಹೋರಾಟದಲ್ಲಿದ್ದಾರೆ’ ಎಂದು ಅವರ ಕುಟುಂಬ ಸದಸ್ಯರು ಮತ್ತು ವಕೀಲರು ಮಂಗಳವಾರ ಹೇಳಿದ್ದಾರೆ.

‘‘ಇಬ್ಬರು ಮಹಿಳೆಯರ ನಡುವಿನ ಜಗಳವನ್ನು ನಿಲ್ಲಿಸಲು ಜಾಕೋಬ್ ಬ್ಲೇಕ್ ಯತ್ನಿಸುತ್ತಿದ್ದಾಗ ಅವರತ್ತ 7 ಗುಂಡುಗಳನ್ನು ಹಾರಿಸಲಾಗಿತ್ತು. ಆ ಪೈಕಿ ನಾಲ್ಕು ಗುಂಡುಗಳು ಅವರಿಗೆ ಬಡಿದವು. ಈ ಎಲ್ಲ ಗುಂಡುಗಳನ್ನು ಒಬ್ಬನೇ ಪೊಲೀಸ್ ಅಧಿಕಾರಿ ಹಾರಿಸಿದ್ದಾರೆ. ಅದೂ ಅಲ್ಲದೆ, ಅವರ ಬಳಿ ಆಯುಧವಿದೆ ಎನ್ನುವ ಯಾವುದೇ ಸೂಚನೆಯೂ ಇರಲಿಲ್ಲ’’ ಎಂದು ಬ್ಲೇಕ್ ಕುಟುಂಬದ ಪರವಾಗಿ ವಾದಿಸುತ್ತಿರುವ ನಾಗರಿಕ ಹಕ್ಕುಗಳ ವಕೀಲ ಬೆನ್ ಕ್ರಂಪ್ ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಕ್ರಂಪ್ ಹೇಳಿದರು.

 ‘‘ಅವರು ನನ್ನ ಮಗನ ಮೇಲೆ 7 ಬಾರಿ ಗುಂಡುಗಳನ್ನು ಹಾರಿಸಿದರು! ಅವನಿಗೆ ಮಹತ್ವವೇ ಇಲ್ಲ ಎನ್ನುವಂತೆ’’ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಾಕೋಬ್ ಬ್ಲೇಕ್ ತಂದೆ ಜಾಕೋಬ್ ಬ್ಲೇಕ್ ಸೀನಿಯರ್ ಹೇಳಿದರು. ‘‘ನನ್ನ ಮಗನಿಗೂ ಮಹತ್ವವಿದೆ. ಅವನು ಒಬ್ಬ ಮನುಷ್ಯ ಹಾಗೂ ಅವನಿಗೆ ಮಹತ್ವವಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News