ಬ್ರಿಟನ್‌ನಲ್ಲಿ ಮತ್ತೆ ಕೊರೋನ ಅಟ್ಟಹಾಸ

Update: 2020-09-21 18:11 GMT

 ಲಂಡನ್,ಸೆ.21: ಮತ್ತೆ ಉಲ್ಬಣಗೊಂಡಿರುವ ಕೊರೋನ ವೈರಸ್ ಸೋಂಕಿನ ಹಾವಳಿಯನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳದೆ ಹೋದಲ್ಲಿ ಅಕ್ಟೋಬರ್ ಮಧ್ಯದ ವೇಳೆಗೆ ಬ್ರಿಟನ್‌ನಲ್ಲಿ ಪ್ರತಿ ದಿನ 50 ಸಾವಿರಕ್ಕೂ ಅಧಿಕ ನೂತನ ಕೊರೋನ ವೈರಸ್ ಸೋಂಕಿನ ಪ್ರಕರಣಗಳನ್ನು ಕಾಣಬೇಕಾದೀತು ಎಂದು ಬ್ರಿಟಿಶ್ ಸರಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಸರ್ ಪ್ಯಾಟ್ರಿಕ್ ವ್ಯಾಲೆನ್ಸ್ ಎಚ್ಚರಿಕೆ ನೀಡಿದ್ದಾರೆ.

ಅಕ್ಟೋಬರ್ ಮಧ್ಯಂತರದ ಬಳಿಕ ಬ್ರಿಟನ್‌ನಲ್ಲಿ ಪ್ರತಿ ದಿನವೂ 200ಕ್ಕೂ ಅಧಿಕ ಸಾವುಗಳು ಸಂಭವಿಸುವ ನಿರೀಕ್ಷೆಯಿದೆಯೆಂದು ವ್ಯಾಲೆನ್ಸ್ ಸಲಹೆ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಪ್ರತಿ ಏಳು ದಿನಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿದೆಯೆಂದು ಹೇಳಿದ್ದಾರೆ.

  ದೇಶದಲ್ಲಿ ಕೊರೋನ ಸೋಂಕಿನ ಎರಡನೇ ಅಲೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಪ್ರಧಾನಿ ಬೋರಿಸ್ ಜಾನ್ಸನ್ ಅಧ್ಯಕ್ಷತತೆಯಲ್ಲಿ ಕೊಬ್ರಾ ತುರ್ತುಸ್ಥಿತಿ ಸಮಿತಿ ಸಭೆ ನಡೆಯಲಿದೆ. ಆನಂತರ ಈ ಬಗ್ಗೆ ಪ್ರಧಾನಿಯವರು ಸಂಸತ್‌ನ ಕೆಳಮನೆ (ಹೌಸ್ ಆಫ್ ಕಾಮನ್ಸ್)ಯಲ್ಲಿ ಹೇಳಿಕೆಯನ್ನು ನೀಡಲಿದ್ದಾರೆ.

ಬ್ರಿಟನ್‌ನಲ್ಲಿ ಬುಧವಾರ 3 899 ಕೊರೋನ ಪ್ರಕರಣಗಳು ವರದಿಯಾಗಿದ್ದು, 18 ಸಾವುಗಳು ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News