ಸಿಂಗಾಪುರ: ಭಾರತೀಯ ಅಳಿಯನನ್ನು ಇರಿದು ಕೊಲೆಗೈದ ಚೀನೀಯನಿಗೆ ಎಂಟೂವರೆ ವರ್ಷ ಜೈಲು

Update: 2020-09-21 18:23 GMT

ಸಿಂಗಾಪುರ,ಸೆ.21: ತನ್ನ ಅಳಿಯನನ್ನು ಇರಿದು ಕೊಲೆಗೈದ ಆರೋಪದಲ್ಲಿ 72 ವರ್ಷ ವಯಸ್ಸಿನ ಚೀನಾ ಮೂಲದ ಉದ್ಯಮಿಯೊಬ್ಬನಿಗೆ ಸಿಂಗಾಪುರದ ನ್ಯಾಯಾಲಯವು ಎಂಟೂವರೆ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

 ಕುಟುಂಬದ ಉದ್ಯಮದ ನಿರ್ವಹಣೆ ಹಾಗೂ ವಿವಾಹೇತರ ಸಂಬಂಧದ ಕುರಿತಾಗಿ ಭುಗಿಲೆದ್ದ ವಿವಾದಗಳ ಹಿನ್ನೆಲೆಯಲ್ಲಿ ಉದ್ಯಮಿ ತಾನ್ ನಾಮ್ ಸೆಂಗ್ ಎಂಬಾತ ತನ್ನ ಭಾರತೀಯ ಮೂಲದ ಅಳಿಯ 38 ವರ್ಷದ ಸ್ಪೆನ್ಸರ್ ತುಪ್ಪಾನಿ ಎಂಬಾತನನ್ನು ಹಾಡುಹಗಲೇ ಕಾಫಿಶಾಪ್ ಒಂದರಲ್ಲಿ ಇರಿದು ಕೊಲೆ ಮಾಡಿದ್ದನೆಂದು ಪ್ರಾಸಿಕ್ಯೂಶನ್ ಆಪಾದಿಸಿತ್ತು.

 ಸ್ಪೆನ್ಸರ್ ತುಪ್ಪಾನಿ ತನ್ನ ಮಾವನ ಕಂಪೆನಿಯಲ್ಲಿ ಪಾಲುದಾರಿಕೆಯನ್ನು ಹೊಂದಿದ್ದನು. ಆತ ತನ್ನ ಕಂಪೆನಿಗೆ ವಂಚನೆಯೆಸಗಿದ್ದಾನೆಂದು ಮಾವ ತಾನ್ ರೊಚ್ಚಿಗೆದ್ದಿದ್ದ. ಈ ಮಧ್ಯೆ ತುಪ್ಪಾನಿ ಇನ್ನೋರ್ವ ಮಹಿಳೆಯ ಜೊತೆ ವಿವಾಹೇತರ ಸಂಬಂಧವನ್ನು ಹೊಂದಿರುವುದನ್ನು ತಾನ್‌ನ ಪುತ್ರಿ ಪತ್ತೆ ಹಚ್ಚಿದ್ದಳು. ಈ ನಡುವೆ ಈ ವಿಚಾರವಾಗಿ ದಂಪತಿಯ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಆದಾಗ್ಯೂ ಅವರು ಒಂದೇ ಮನೆಯಲ್ಲಿ ವಾಸವಾಗಿದ್ದರು.

2017ರ ಜುಲೈ 19ರಂದು ಅಳಿಯ ತುಪ್ಪಾನಿ ಕಾಪಿ ಶಾಪ್ ಒಂದರಲ್ಲಿ ಉಪಹಾರ ಸೇವಿಸುತ್ತಿದ್ದನ್ನು ಕಂಡ ಟಾನ್ ಅಲ್ಲಿಗೆ ಧಾವಿಸಿ ಬಂದು ಆತನೊಂದಿಗೆ ವಾಗ್ವಾದಕ್ಕಿಳಿದು, ಆತನಿಗೆ ಚೂರಿಯಿಂದ ಇರಿದು ಸಾಯಿಸಿದ್ದನೆಂದು ಪ್ರಾಸಿಕ್ಯೂಶನ್ ಆಪಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News