ಕೊಲ್ಲಿ ಸಮುದ್ರದಲ್ಲೇ ಉಳಿಯುವ ಅಮೆರಿಕ ಯುದ್ಧನೌಕೆ: ಪೆಂಟಗನ್
ವಾಶಿಂಗ್ಟನ್, ಜ. 4: ಇರಾನ್ ಇತ್ತೀಚೆಗೆ ಹಾಕಿರುವ ಬೆದರಿಕೆಗಳ ಹಿನ್ನೆಲೆಯಲ್ಲಿ, ಅಮೆರಿಕದ ವಿಮಾನವಾಹಕ ಯುದ್ಧನೌಕೆ ಯುಎಸ್‌ಎಸ್ ನಿಮಿಟ್ಝ್ ಕೊಲ್ಲಿಯಲ್ಲೇ ಉಳಿಯಲಿದೆ ಎಂದು ಅವೆುರಿಕದ ರಕ್ಷಣಾ ಇಲಾಖೆ ಪೆಂಟಗನ್ ರವಿವಾರ ಹೇಳಿದೆ.
ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸುವುದಕ್ಕಾಗಿ ಯುದ್ಧನೌಕೆಯು ಅಮೆರಿಕಕ್ಕೆ ಮರಳಲಿದೆ ಎಂಬ ವರದಿಗಳಿಗೆ ಪೆಂಟಗನ್ ಈ ಪ್ರತಿಕ್ರಿಯೆ ನೀಡಿದೆ.
‘ನಿಮಿಟ್ಝ್’ ನವೆಂಬರ್ ತಿಂಗಳ ಕೊನೆಯಿಂದ ಕೊಲ್ಲಿ ಸಮುದ್ರದಲ್ಲಿ ಗಸ್ತು ತಿರುಗುತ್ತಿದೆ. ಆದರೆ, ದೇಶಕ್ಕೆ ಮರಳುವಂತೆ ಯುದ್ಧನೌಕೆಗೆ ಅಮೆರಿಕದ ಉಸ್ತುವಾರಿ ರಕ್ಷಣಾ ಕಾರ್ಯದರ್ಶಿ ಕ್ರಿಸ್ಟೋಫರ್ ಸಿ. ಮಿಲ್ಲರ್ ಕಳೆದ ವಾರ ಸೂಚಿಸಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
‘‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕದ ಇತರ ಸರಕಾರಿ ಅಧಿಕಾರಿಗಳ ವಿರುದ್ಧ ಇರಾನ್ ನಾಯಕರು ಇತ್ತೀಚೆಗೆ ಬೆದರಿಕೆಗಳನ್ನು ಹಾಕಿದ ಬಳಿಕ, ಕೊಲ್ಲಿ ವಲಯದಲ್ಲೇ ಉಳಿಯುವಂತೆ ನಾನು ಯುದ್ಧನೌಕೆಗೆ ಆದೇಶ ನೀಡಿದ್ದೇನೆ’’ ಎಂದು ಮಿಲ್ಲರ್ ರವಿವಾರ ಹೇಳಿದ್ದಾರೆ.