ಮಸೂದ್ ಅಝರ್ ಬಂಧನಕ್ಕೆ ಜನವರಿ 18ರ ಗಡು: ಪಾಕ್ ನ್ಯಾಯಾಲಯ ಆದೇಶ
ಲಾಹೋರ್,ಜ.9: ಭಯೋತ್ಪಾದನೆಗೆ ಹಣಕಾಸು ನೆರವು ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿ ನಿಷೇಧಿತ ಜೈಶೆ ಮುಹಮ್ಮದ್ (ಜೆಇಎಂ) ಗುಂಪಿಗೆ ಸೇರಿದ ಮಸೂದ್ ಅಝರ್‌ನನ್ನು ಜನವರಿ 18ರೊಳಗೆ ಬಂಧಿಸುವಂತೆ ಪಾಕಿಸ್ತಾನದ ಭಯೋತ್ಪಾದನೆ ವಿರೋಧಿ ನ್ಯಾಯಾಲಯ (ಎಟಿಸಿ)ವು, ಪಾಕ್‌ನ ಪಂಜಾಬ್ ಪ್ರಾಂತದ ಭಯೋತ್ಪಾದನೆ ನಿಗ್ರಹ ದಳಕ್ಕೆ ಆದೇಶ ನೀಡಿದೆ.
ಪ್ರಕರಣದ ವಿಚಾರಣೆಯನ್ನು ಶುಕ್ರವಾರ ನಡೆಸಿ ಎಟಿಸಿ ನ್ಯಾಯಾಧೀಶೆ ನತಾಶಾ ನಸೀಮ್ ಸುಪ್ರಾ ಅವರು ಮಸೂದ್ ಅಝರ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದು, ಹಾಗೂ ಜನವರಿ 18ರೊಳಗೆ ಆತನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ಸೂಚಿಸಿದರು.
ಒಂದು ವೇಳೆ ಅಝರ್‌ನನ್ನು ಬಂಧಿಸಲು ಪೊಲೀಸರು ವಿಫಲರಾದಲ್ಲಿ, ನ್ಯಾಯಾಲಯವು ಆತನನ್ನು ಘೋಷಿತ ಅಪರಾಧಿಯೆಂದು ಪ್ರಕಟಿಸಿ, ಕಾನೂನುಕ್ರಮಗಳನ್ನು ಆರಂಭಿಸಲಿದೆ ಎಂದು ನ್ಯಾಯಾಲಯವು ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
2019ರಲ್ಲಿ ಭಾರತದ ಜಮ್ಮುಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ ಘಟನೆಯ ಬಳಿಕ ಪಾಕಿಸ್ತಾನದ ಪಂಜಾಬ್ ಪ್ರಾಂತ ಪೊಲೀಸರು ಕಾರ್ಯಾಚರಣೆ ನಡೆಸಿ ಆರು ಮಂದಿ ಜೆಇಎಂ ಉಗ್ರರನ್ನು ಲಾಹೋರ್‌ನಿಂದ 130 ಕಿ.ಮೀ.ದೂರದ ಗುಜ್ರನ್‌ವಾಲಾದಲ್ಲಿ ಬಂಧಿಸಿದ್ದರು.