×
Ad

ತೈವಾನ್ ವಿರುದ್ಧ ಅಮೆರಿಕ ನಿರ್ಬಂಧ ರದ್ದು

Update: 2021-01-10 23:33 IST

ವಾಶಿಂಗ್ಟನ್,ಜ.10: ಚೀನಾವನ್ನು ತುಷ್ಟೀಕರಿಸುವ ತನ್ನ ದೀರ್ಘಕಾಲದ ನೀತಿಗೆ ಕೊನೆ ಹಾಡಿರುವ ಅಮೆರಿಕವು, ಅಮೆರಿಕ ಹಾಗೂ ತೈವಾನ್ ರಾಜತಾಂತ್ರಿಕರು ಮತ್ತು ಅಧಿಕಾರಿಗಳ ನಡುವಿನ ಸಂಪರ್ಕಗಳಿಗೆ ತಾನು ಸ್ವಯಂ ವಿಧಿಸಿದ್ದ ನಿರ್ಬಂಧಗಳನ್ನು ರದ್ದುಪಡಿಸುವುದಾಗಿ ಘೋಷಿಸಿದೆ.

 ಈ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಶನಿವಾರ ಹೇಳಿಕೆಯೊಂದನ್ನು ನೀಡಿದ್ದು, ‘‘ ಹಲವಾರು ದಶಕಗಳಿಂದ ವಿದೇಶಾಂಗ ಇಲಾಖೆಯು ನಮ್ಮ ರಾಜತಾಂತ್ರಿಕರನ್ನು, ಸಶಸ್ತ್ರ ಪಡೆಗಳು ಮತ್ತಿತರ ಇಲಾಖೆಗಳ ಅಧಿಕಾರಿಗಳು ತಮ್ಮ ತೈವಾನ್ ಸಹವರ್ತಿಗಳ ಜೊತೆಗಿನ ಒಡನಾಟವನ್ನು ನಿಯಂತ್ರಿಸಲು ಸಂಕೀರ್ಣವಾದ ಆಂತರಿಕ ನಿರ್ಬಂಧಗಳನ್ನು ಸೃಷ್ಟಿಸಿತ್ತು. ನಾನು ಈ ಎಲ್ಲಾ ಸ್ವಯಂಘೋಷಿತ ನಿರ್ಬಂಧಗಳನ್ನು ರದ್ದುಪಡಿಸುವುದಾಗಿ ಇಂದು ನಾನು ಪ್ರಕಟಿಸುತ್ತೇನೆ’’ ಎಂದು ತಿಳಿಸಿದರು.

 ತೈವಾನ್‌ನ್ನು ಒಂದು ವಿಶ್ವಾಸಾರ್ಹ ಹಾಗೂ ಅನಧಿಕೃತವಾದ ಪಾಲುದಾರನೆಂದುಬಣ್ಣಿಸಿದ ಪಾಂಪಿಯೊ, ಅದರ ಜೊತೆಗಿನ ಬಾಂಧವ್ಯಗಳ ಕುರಿತ ಮಾರ್ಗದರ್ಶಿ ಸೂತ್ರವನ್ನು ಪರಿಶೀಲಿಸುವಂತೆ ಅಮೆರಿಕದ ಕಾರ್ಯನಿರ್ವಹಣಾ ಸಂಸ್ಥೆಗಳಿಗೆ ಸೂಚಿಸುವುದಾಗಿ ಹೇಳಿದ್ದಾರೆ. ತೈವಾನನ್ನು ತನ್ನಿಂದ ಸಿಡಿದುಹೋಗಿರುವ ಪ್ರಾಂತವೆಂದು ಚೀನಾವು ಪರಿಗಣಿಸಿದ್ದು, ಅದು ಮತ್ತೆ ತನ್ನೊಂದಿಗೆ ವಿಲೀನಗೊಳ್ಳಬೇಕೆಂದು ಅದು ಪ್ರತಿಪಾದಿಸುತ್ತಿದೆ. ಇದಕ್ಕಾಗಿ ಬಲಪ್ರಯೋಗಿಸಲು ಸಿದ್ಧವೆಂಬ ಸುಳಿವನ್ನು ಅದು ನೀಡುತ್ತಾ ಬಂದಿದೆ. ಆದರೆ ತೈವಾನ್ ಒಂದು ಸಾರ್ವಭೌಮ ದೇಶವೆಂದು ತೈವಾನ್ ನಾಯಕರು ಪ್ರತಿಪಾದಿಸುತ್ತಾ ಬಂದಿದ್ದಾರೆ.

1949ರಲ್ಲಿ ಅಂತರ್ಯುದ್ಧ ಕೊನೆಗೊಂಡ ಬಳಿಕ ತೈವಾನ್ ಚೀನಾದಿಂದ ಬೇರ್ಪಟ್ಟಿತ್ತು. ಆವಾಗಿನಿಂದಲೂ ಅಮೆರಿಕವು ತೈವಾನ್ ಜೊತೆ ನಿಕಟವಾದ ಬಾಂಧವ್ಯವನ್ನು ಇಟ್ಟುಕೊಂಡಿತ್ತು.

ಆದರೆ ಇತ್ತೀಚಿನ ವರ್ಷಗಳಲ್ಲಿ ಚೀನಾದ ಜೊತೆ ಸ್ನೇಹವನ್ನು ಬಲಪಡಿಸುವ ಪ್ರಯತ್ನವಾಗಿ ಅಮೆರಿಕವು ತೈವಾನ್ ಜೊತೆಗಿನ ಬಾಂಧವ್ಯವನ್ನು ಬಹಿರಂಗವಾಗಿ ಪ್ರದರ್ಶಿಸುವುದನ್ನು ತಪ್ಪಿಸಿಕೊಳ್ಳುತ್ತಾ ಬಂದಿದೆ.

ತೈವಾನ್ ವಿರುದ್ಧ ಹೇರಲಾದ ನಿರ್ಬಂಧಗಳನ್ನು ರದ್ದುಪಡಿಸುವ ಕ್ರಮಗಳನ್ನು ಏಕಪಕ್ಷೀಯವಾಗಿ ಕೊನೆಗೊಳಿಸಿದೆ. ಬೀಜಿಂಗ್‌ನ ಕಮ್ಯೂನಿಸ್ಟ್ ಆಡಳಿತವನ್ನು ಸಂತುಷ್ಟಗೊಳಿಸುವ ಪ್ರಯತ್ನಗಳು ಇನ್ನು ಮುಂದೆ ಇರುವುದಿಲ್ಲ’ ಮೈಕ್ ಪಾಂಪಿಯೊ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಿಡಿಕಾರಿದ ಚೀನಾ ತೈವಾನ್ ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನು ರದ್ದುಪಡಿಸುವ ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪಾಂಪಿಯೊ ಅವರ ನಿರ್ಧಾರಕ್ಕೆ ಚೀನಾ ತೀವ್ರ ಅಕ್ರೋಶ ವ್ಯಕ್ತಪಡಿಸಿದೆ. ‘‘ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಜನವರಿ 20ರಂದು ಅಧಿಕಾರ ಸ್ವೀಕರಿಸುವುದಕ್ಕೆ ಮುಂಚಿತವಾಗಿ ಚೀನಾ-ಅಮೆರಿಕ ದ್ವಿಪಕ್ಷೀಯ ಬಾಂಧವ್ಯದ ಮೇಲೆ ದೀರ್ಘಕಾಲದ ಗಾಯದ ಗುರುತನ್ನು ಮೂಡಿಸುವ ದುರುದ್ದೇಶ ಇದಾಗಿದೆ’’ ಎಂದು ಚೀನಾದ ಕಮ್ಯೂನಿಸ್ಟ್ ಪಕ್ಷದ ಅಧಿಕೃತ ಮಾಧ್ಯಮವೊಂದು ಕಿಡಿ ಕಾರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News