ಕೊನೆಗೂ ವುಹಾನ್ ತಲುಪಿದ ಡಬ್ಲುಎಚ್‌ಒ ಪರಿಣತರ ತಂಡ

Update: 2021-01-14 18:17 GMT

ವುಹಾನ್ (ಚೀನಾ), ಜ. 14: ಒಂದು ವರ್ಷದ ಹಿಂದೆ ಕಾಣಿಸಿಕೊಂಡಿರುವ ಕೊರೋನ ವೈರಸ್‌ನ ಮೂಲವನ್ನು ಪತ್ತೆಹಚ್ಚುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಪರಿಣತರ ತಂಡವೊಂದು ಭಾರೀ ವಿಳಂಬದ ಬಳಿಕ, ಕೊನೆಗೂ ಗುರುವಾರ ಚೀನಾದ ವುಹಾನ್ ನಗರಕ್ಕೆ ಆಗಮಿಸಿದೆ.

ಆದರೆ, ತಂಡದ ಇಬ್ಬರ ರಕ್ತದಲ್ಲಿ ಕೊರೋನ ವೈರಸ್ ಪ್ರತಿಕಾಯಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಅವರು ಸಿಂಗಾಪುರದಲ್ಲಿ ವಿಮಾನ ಏರುವುದನ್ನು ತಡೆಯಲಾಗಿದೆ.

13 ವಿಜ್ಞಾನಿಗಳನ್ನು ಒಳಗೊಂಡ ಅಂತರ್‌ರಾಷ್ಟ್ರೀಯ ತಂಡವು ವುಹಾನ್‌ಗೆ ಆಗಮಿಸಿದಾಗ ಚೀನಾದ ಅಧಿಕಾರಿಗಳು ಅವರನ್ನು ಭೇಟಿಯಾಗಿ ಅವರ ಗಂಟಲು ದ್ರವ್ಯ ಮಾದರಿಗಳನ್ನು ಪಡೆದುಕೊಂಡರು. ಬಳಿಕ, ಎರಡು ವಾರಗಳ ಕ್ವಾರಂಟೈನ್‌ಗಾಗಿ ಅವರನ್ನು ಹೊಟೇಲೊಂದಕ್ಕೆ ಕರೆದೊಯ್ಯಲಾಯಿತು. ಬಳಿಕವಷ್ಟೇ ಅವರು ತಮ್ಮ ಕಾರ್ಯವನ್ನು ಆರಂಭಿಸುತ್ತಾರೆ.

ಕೊರೋನ ವೈರಸ್ 2019ರ ಕೊನೆಯಲ್ಲಿ ವುಹಾನ್ ನಗರದಲ್ಲಿ ಮೊದಲು ಪತ್ತೆಯಾಯಿತು. ಬಳಿಕ ಅದು ಜಗತ್ತಿನಾದ್ಯಂತ ಹರಡಿದ್ದು, ಈವರೆಗೆ ಸುಮಾರು 20 ಲಕ್ಷ ಜನರು ರೋಗಕ್ಕೆ ಬಲಿಯಾಗಿದ್ದಾರೆ ಹಾಗೂ ಕೋಟಿಗಟ್ಟಳೆ ಜನರು ಅದರ ಸೋಂಕಿಗೆ ಒಳಗಾಗಿದ್ದಾರೆ.

ಪ್ರಾಣಿಗಳಿಂದ ಮಾನವರವರೆಗೆ ವೈರಸ್ ಹಾದು ಬಂದ ದಾರಿಯನ್ನು ಗುರುತಿಸುವುದು ಭವಿಷ್ಯದಲ್ಲಿ ಈ ಮಾದರಿಯ ಸಾಂಕ್ರಾಮಿಕಗಳನ್ನು ತಡೆಯಲು ಅಗತ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News