ಇರಾಕ್: ಅವಳಿ ಆತ್ಮಹತ್ಯಾ ದಾಳಿಗೆ ಕನಿಷ್ಠ 28 ಬಲಿ

Update: 2021-01-21 18:24 GMT

ಬಗ್ದಾದ್,ಜ.21: ಇರಾಕ್ ರಾಜಧಾನಿ ಬಗ್ದಾದ್‌ನ ಜನದಟ್ಟಣೆಯ ಮಾರುಕಟ್ಟೆಯಲ್ಲಿ ಗುರುವಾರ ನಡೆದ ಅವಳಿ ಆತ್ಮಹತ್ಯಾ ಬಾಂಬ್ ಸ್ಫೋಟದ ಘಟನೆಗಳಲ್ಲಿ ಕನಿಷ್ಠ 28 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 73ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

 ಕೇಂದ್ರ ಬಗ್ದಾದ್‌ನಲ್ಲಿರುವ ಬಾಬ್ ಅಲ್-ಶರ್ಖಿ ವಾಣಿಜ್ಯ ಪ್ರದೇಶದಲ್ಲಿ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ತಮ್ಮನ್ನು ತಾವೇ ಸ್ಫೋಟಿಸಿಕೊಂಡಿದ್ದಾರೆಂದು ಸೇನಾ ವಕ್ತಾರ ಯಾಹ್ಯಾ ರಸೂಲ್ ತಿಳಿಸಿದ್ದಾರೆ.

ಬಗ್ದಾದ್‌ನ ಅತ್ಯಂತ ಜನನಿಬಿಡ ಮಾರುಕಟ್ಟೆಯಾದ ಅಲ್‌ಶರ್ಖಿಯಲ್ಲಿ 2018ರಲ್ಲಿಯೂ ಆತ್ಮಹತ್ಯಾ ದಾಳಿ ನಡೆದಿತ್ತು. ಇಡೀ ಮಾರುಕಟ್ಟೆಯ ನೆಲದಲ್ಲಿ ರಕ್ತದ ಕೋಡಿ ಹರಿದಿದ್ದು, ಶವಗಳ ಛಿದ್ರವಿಛ್ಛಿದ್ರ ಅವಶೇಷಗಳು ಹರಡಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬಾಂಬ್ ಸ್ಫೋಟದಲ್ಲಿ ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿರುವುದಾಗಿ ಮೂಲಗಳು ತಿಳಿಸಿವೆ ಆದರೆ ಈ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಈವರೆಗೆ ಯಾವುದೇ ಗುಂಪು ವಹಿಸಿಕೊಂಡಿಲ್ಲ. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಇರಾಕ್‌ನಲ್ಲಿ ಐಸಿಸ್ ಹಾಗೂ ಉಗ್ರಗಾಮಿ ಗುಂಪುಗಳು ತಮ್ಮ ದಾಳಿಗಳನ್ನು ತೀವ್ರಗೊಳಿಸಿರುವುದು ಕಂಡುಬಂದಿದೆ.

 ಸ್ಫೋಟದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ರಾಜಧಾನಿಯ ಎಲ್ಲಾ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗಿದೆಯೆಂದು ಇರಾಕ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.

ಅಕ್ಟೋಬರ್‌ನಲ್ಲಿ ಅವಧಿ ಪೂರ್ವ ಚುನಾವಣೆ ನಡೆಸಲು ಇರಾಕ್ ಸರಕಾರವು ಅವಿರೋಧವಾಗಿ ತೀರ್ಮಾನಿಸಿದ ಮೂರು ದಿನಗಳ ಬಳಿಕ ಗುರುವಾರ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ. ಸರಕಾರಿ ವಿರೋಧಿ ಪ್ರತಿಭಟನೆಕಾರರ ಬೇಡಿಕೆಗಳನ್ನು ಈಡೇರಿಸಲು ಜುಲೈನಲ್ಲಿ ಅವಧಿಪೂರ್ವ ಚುನಾವಣೆಗಳನ್ನು ನಡೆಸುವುದಾಗಿ ಇರಾಕ್ ಪ್ರಧಾನಿ ಮುಸ್ತಫಾ ಅಲ್ ಖಾದಿಮಿ ಸೋಮವಾರ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News