×
Ad

ಚೀನಾದ ಕ್ರಮಗಳು ಗಡಿಯಲ್ಲಿ ಶಾಂತಿಗೆ ತೀವ್ರ ವ್ಯತ್ಯಯವುಂಟು ಮಾಡಿವೆ: ಕೇಂದ್ರ

Update: 2021-02-04 23:10 IST

ಹೊಸದಿಲ್ಲಿ,ಫೆ.4: ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸುವ ಚೀನಿ ಸೇನೆಯ ಪ್ರಯತ್ನಗಳು ಪ್ರದೇಶದಲ್ಲಿನ ಶಾಂತಿ ಮತ್ತು ನೆಮ್ಮದಿಗೆ ಗಂಭೀರ ವ್ಯತ್ಯಯವನ್ನುಂಟು ಮಾಡಿವೆ ಎಂದು ಸರಕಾರವು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದೆ.

 ಚೀನಿ ಸೇನೆಯ ಪ್ರಯತ್ನಗಳಿಗೆ ಭಾರತೀಯ ಸಶಸ್ತ್ರ ಪಡೆಗಳು ಸೂಕ್ತ ಉತ್ತರವನ್ನು ನೀಡಿವೆ ಮತ್ತು ಇಂತಹ ಏಕಪಕ್ಷೀಯ ಪ್ರಯತ್ನಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಚೀನಾಕ್ಕೆ ಸ್ಪಷ್ಟಪಡಿಸಲಾಗಿದೆ ಎಂದು ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಮುರಳೀಧರನ್ ಅವರು ತಿಳಿಸಿದರು.

ಮಾತುಕತೆಗಳು ಮತ್ತು ಸಂಧಾನಗಳ ಮೂಲಕ ಗಡಿ ಸಮಸ್ಯೆಗೆ ನ್ಯಾಯೋಚಿತ ಮತ್ತು ಪರಸ್ಪರ ಸಮ್ಮತ ಪರಿಹಾರವನ್ನು ಕಂಡುಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಗಡಿ ಬಿಕ್ಕಟ್ಟು ಕುರಿತ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಅವರು ತಿಳಿಸಿದರು.

ಗಡಿ ಸಮಸ್ಯೆಗೆ ಅಂತಿಮ ಇತ್ಯರ್ಥ ಬಾಕಿಯುಳಿದಿರುವಂತೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳುವುದು ದ್ವಿಪಕ್ಷೀಯ ಸಂಬಂಧದ ಒಟ್ಟಾರೆ ಅಭಿವೃದ್ಧಿಗೆ ಅಗತ್ಯ ಬುನಾದಿಯಾಗಿದೆ ಎಂದೂ ಉಭಯ ದೇಶಗಳು ಒಪ್ಪಿಕೊಂಡಿವೆ ಎಂದ ಸಚಿವರು, ಚೀನಾದೊಂದಿಗೆ ಭಾರತದ ವ್ಯವಹಾರವು ಸಂಕೀರ್ಣವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಮತ್ತು ಯಾವುದೇ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ವಿವಾದಗಳಾಗಲು ಅವಕಾಶ ನೀಡದಿರಲು ಉಭಯ ದೇಶಗಳು ಸಹಮತ ವ್ಯಕ್ತಪಡಿಸಿವೆ ಎಂದರು.

ಪೂರ್ವ ಲಡಾಖ್ ಬಿಕ್ಕಟ್ಟು ಕುರಿತಂತೆ ಅವರು,ಕಳೆದ ಹಲವಾರು ತಿಂಗಳುಗಳಲ್ಲಿ ಎಲ್ಲ ಸಂಘರ್ಷ ತಾಣಗಳಿಂದ ಸೇನೆಗಳ ಸಂಪೂರ್ಣ ವಾಪಸಾತಿ ಮತ್ತು ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಹಾಗೂ ನೆಮ್ಮದಿಯ ಸಂಪೂರ್ಣ ಮರುಸ್ಥಾಪನೆಗಾಗಿ ಉಭಯ ದೇಶಗಳು ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಮಾತುಕತೆಗಳಲ್ಲಿ ತೊಡಗಿಕೊಂಡಿವೆ ಎಂದರು.

ಉಭಯ ದೇಶಗಳು ಭಾರತ-ಚೀನಾ ಗಡಿ ವ್ಯವಹಾರಗಳ ಕುರಿತು ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ರಚಿಸಲಾಗಿರುವ ಕಾರ್ಯ ಸಮಿತಿಯ ಆರು ಸಭೆಗಳು ಮತ್ತು ಹಿರಿಯ ಕಮಾಂಡರ್‌ಗಳ ಒಂಭತ್ತು ಸಭೆಗಳನ್ನು ನಡೆಸಿವೆ ಎಂದೂ ಮುರಳೀಧರನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News