ಭ್ರಷ್ಟಾಚಾರ ಪ್ರಕರಣ: ನೆತನ್ಯಾಹು ನ್ಯಾಯಾಲಯಕ್ಕೆ ಹಾಜರು
Update: 2021-02-08 22:53 IST
ಜೆರುಸಲೇಮ್, ಫೆ. 8: ತನ್ನ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿ ವಿಚಾರಣೆಯನ್ನು ಎದುರಿಸಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ ಜೆರುಸಲೇಮ್‌ನಲ್ಲಿರುವ ನ್ಯಾಯಾಲಯವೊಂದಕ್ಕೆ ಹಾಜರಾದರು.
ಇನ್ನು ಆರು ವಾರಗಳಲ್ಲಿ ಅವರು ಮರುಚುನಾವಣೆಯೊಂದನ್ನು ಎದುರಿಸುತ್ತಿದ್ದು, ಅದಕ್ಕೆ ಪೂರ್ವಭಾವಿಯಾಗಿ ಅವರ ವಿಚಾರಣೆಯು ಮಹತ್ವದ ಹಂತವನ್ನು ಪ್ರವೇಶಿಸಿದೆ.
ಅಧಿಕಾರದಲ್ಲಿರುವಾಗಲೇ ದೋಷಾರೋಪ ಹೊರಿಸಲ್ಪಟ್ಟ ಮೊದಲ ಇಸ್ರೇಲ್ ಪ್ರಧಾನಿ ನೆತನ್ಯಾಹು ಆಗಿದ್ದಾರೆ.
ಅವರು ಅನುಚಿತ ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ ಹಾಗೂ ತನ್ನ ಪರವಾದ ಸುದ್ದಿ ಪ್ರಸಾರ ಮಾಡುವುದಕ್ಕೆ ಪ್ರತಿಯಾಗಿ ಅನುಕೂಲಕರ ನಿಯಮಗಳನ್ನು ತರುವ ಒಡಂಬಡಿಕೆಯನ್ನು ಬೃಹತ್ ಮಾಧ್ಯಮ ಸಂಸ್ಥೆಗಳೊಂದಿಗೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳನ್ನು ಕಳೆದ ವರ್ಷ ಅವರ ವಿರುದ್ಧ ಹೊರಿಸಲಾಗಿದೆ.