ಬಿಟ್ಟರೆ ಟ್ರಂಪ್ ತನ್ನ ಚಾಳಿಯನ್ನು ಪುನರಾವರ್ತಿಸಬಹುದು

Update: 2021-02-13 03:57 GMT

ವಾಶಿಂಗ್ಟನ್, ಫೆ. 12: ತನ್ನ ಬೆಂಬಲಿಗರ ಮೂಲಕ ಸಂಸತ್ ಭವನದ ಮೇಲೆ ದಾಳಿ ಮಾಡಿಸಿದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಸೆನೆಟ್ ಅಪರಾಧಿ ಎಂದು ಘೋಷಿಸದಿದ್ದರೆ, ಅವರು ತನ್ನ ಈ ಚಾಳಿಯನ್ನು ಪುನರಾವರ್ತಿಸಬಹುದು ಎಂದು ಡೆಮಾಕ್ರಟಿಕ್ ಪಕ್ಷದ ಪ್ರಾಸಿಕ್ಯೂಟರ್‌ಗಳು ಗುರುವಾರ ಎಚ್ಚರಿಸಿದ್ದಾರೆ.

ಜನವರಿ 6ರ ದಾಳಿಗೆ ಪೂರ್ವಭಾವಿಯಾಗಿ ಹಲವು ವಾರಗಳಿಂದ ಟ್ರಂಪ್ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಆಡಿದ್ದ ಉದ್ರೇಕಕಾರಿ ಮಾತುಗಳ ಬಗ್ಗೆ ಟ್ರಂಪ್ ವಾಗ್ದಂಡನೆ ವಿಚಾರಣೆಯ ಮೊದಲ ಮೂರು ದಿನ ಪ್ರಮುಖವಾಗಿ ಚರ್ಚಿಸಲಾಯಿತು.

‘‘ನವೆಂಬರ್ ಮೂರರಂದು ನಡೆದ ಚುನಾವಣೆಯಲ್ಲಿ ಜೋ ಬೈಡನ್ ಎದುರು ನಾನು ಸೋತಿರುವುದಕ್ಕೆ ಚುನಾವಣೆಯಲ್ಲಿ ನಡೆದಿರುವ ವಂಚನೆಯೇ ಕಾರಣ ಹಾಗೂ ಇದರ ವಿರುದ್ಧ ಜನರು ಹೋರಾಡಬೇಕು ಹಾಗೂ ಕಳ್ಳತನವನ್ನು ತಡೆಯಬೇಕು’’ ಎಂಬುದಾಗಿ ಟ್ರಂಪ್ ಹೇಳಿದ್ದರು.

‘‘ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಹಿಂಸಾಚಾರ ಮತ್ತೊಮ್ಮೆ ಸಂಭವಿಸುತ್ತದೆ. ಆಗ ನಾವು ನಮ್ಮನ್ನಲ್ಲದೆ ಬೇರೆ ಯಾರನ್ನೂ ದೂರಲು ಸಾಧ್ಯವಿಲ್ಲ’’ ಎಂದು ಪ್ರಧಾನ ವಾಗ್ದಂಡನೆ ಮ್ಯಾನೇಜರ್, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯೆ ಜೇಮೀ ರಸ್ಕಿನ್ ಗುರುವಾರ ಸೆನೆಟ್‌ನಲ್ಲಿ ಹೇಳಿದರು.

ಡೊನಾಲ್ಡ್ ಟ್ರಂಪ್ 2024ರಲ್ಲಿ ಇನ್ನೊಮ್ಮೆ ಸ್ಪರ್ಧಿಸಿ ಸೋತರೆ ಏನಾಗಬಹುದು ಎಂಬ ಚಿಂತೆ ನನ್ನನ್ನು ಕಾಡುತ್ತಿದೆ ಎಂದು ಡೆಮಾಕ್ರಟಿಕ್ ಪಕ್ಷದ ಸಂಸದ ಟೆಡ್ ಲಿಯು ಸೆನೆಟ್‌ನಲ್ಲಿ ಹೇಳಿದರು.

ರಿಪಬ್ಲಿಕನ್ ಪಕ್ಷದ ಸಂಸದರ ನಿರಾಸಕ್ತಿ

ಟ್ರಂಪ್ ವಾಗ್ದಂಡನೆಯ ವಿಷಯದಲ್ಲಿ ಅವರ ರಿಪಬ್ಲಿಕನ್ ಪಕ್ಷದ ಸೆನೆಟ್ ಸದಸ್ಯರು ನಿರಾಸಕ್ತಿ ತಾಳಿದ್ದು, ನಿರ್ಣಯವು ರಿಪಬ್ಲಿಕನ್ನರ ಪ್ರಾಬಲ್ಯದ ಸೆನೆಟ್‌ನಲ್ಲಿ ಅಂಗೀಕಾರಗೊಳ್ಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.

ಡೆಮಾಕ್ರಟಿಕ್ ಸಂಸದರ ಪ್ರಾಬಲ್ಯವಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ವಾಗ್ದಂಡನೆ ನಿರ್ಣಯವನ್ನು ಈಗಾಗಲೇ ಅಂಗೀಕರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News