×
Ad

ಇಸ್ರೇಲ್ ಪ್ರಧಾನಿ ನೆತನ್ಯಾಹುರನ್ನು ಬೈಡನ್ ನಿರ್ಲಕ್ಷಿಸುತ್ತಿಲ್ಲ: ಶ್ವೇತಭವನ

Update: 2021-02-13 23:45 IST

ವಾಶಿಂಗ್ಟನ್, ಫೆ. 13: ಜನವರಿ 20ರಂದು ಅಧಿಕಾರ ವಹಿಸಿಕೊಂಡಂದಿನಿಂದ ವಿದೇಶಿ ನಾಯಕರಿಗೆ ಮಾಡಿದ ಫೋನ್ ಕರೆಗಳ ಮೊದಲ ಸುತ್ತಿನಲ್ಲಿ ಸೇರಿಸಿಕೊಳ್ಳದಿರುವ ಮೂಲಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪವನ್ನು ಶ್ವೇತಭವನ ನಿರಾಕರಿಸಿದೆ.

 ಅಮೆರಿಕ ಅಧ್ಯಕ್ಷ ಮತ್ತು ಇಸ್ರೇಲ್‌ನ ದೀರ್ಘಾವಧಿಯ ಪ್ರಧಾನಿ ನಡುವೆ ಇನ್ನೂ ನೇರ ಸಂಪರ್ಕ ಸ್ಥಾಪನೆಯಾಗದಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ನೆತನ್ಯಾಹು ಆಪ್ತ ಸಂಬಂಧವನ್ನು ಹೊಂದಿರುವುದಕ್ಕೆ ಅವೆುರಿಕದ ನೂತನ ಸರಕಾರ ಈ ರೀತಿಯಾಗಿ ತನ್ನ ಅತೃಪ್ತಿಯನ್ನು ಸೂಚಿಸುತ್ತಿದೆ ಎಂಬುದಾಗಿ ಇಸ್ರೇಲ್ ಮತ್ತು ಮಧ್ಯಪ್ರಾಚ್ಯದ ವಿಶ್ಲೇಷಕರು ಭಾವಿಸಿದ್ದಾರೆ.

‘‘ಇಸ್ರೇಲ್ ಪ್ರಧಾನಿ ನೆತನ್ಯಾಹು ಜೊತೆ ಮಾತನಾಡುವುದನ್ನು ಬೈಡನ್ ಎದುರು ನೋಡುತ್ತಿದ್ದಾರೆ’’ ಎಂದು ಶ್ವೇತಭವನದ ವಕ್ತಾರೆ ಜೆನ್ ಸಾಕಿ ಶುಕ್ರವಾರ ತನ್ನ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

ಯಾವಾಗ ಕರೆ ಮಾಡುತ್ತಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಶೀಘ್ರವೇ ಕರೆ ಮಾಡುತ್ತಾರೆ ಎಂದು ನಾನು ಭರವಸೆ ನೀಡಬಲ್ಲೆ. ಆದರೆ ನಿರ್ದಿಷ್ಟ ಸಮಯ ಅಥವಾ ಗಡುವು ನನ್ನಲ್ಲಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News