ಉತ್ತರ ಇರಾಕ್ ಗಡಿಯಲ್ಲಿ 13 ಟರ್ಕಿ ಪ್ರಜೆಗಳ ಮೃತದೇಹ ಪತ್ತೆ

Update: 2021-02-14 17:34 GMT
photo: twitter

  ಅಂಕಾರಾ,ಫೆ.14: ಕುರ್ದಿಷ್ ಬಂಡುಕೋರರು ಅಪಹರಿಸಿರುವ 13 ಮಂದಿ ಟರ್ಕಿ ಪ್ರಜೆಗಳ ಮೃತದೇಹಗಳು ಉತ್ತರ ಇರಾಕ್‌ನಲ್ಲಿರುವ ಗುಹಾ ಸಂಕೀರ್ಣವೊಂದರಲ್ಲಿ ಪತ್ತೆಯಾಗಿದೆಯೆಂದು ಟರ್ಕಿಯ ರಕ್ಷಣಾ ಸಚಿವ ಹುಲುಸಿ ಅಕಾರ್ ರವಿವಾರ ತಿಳಿಸಿದ್ದಾರೆ.

  ಮೃತಪಟ್ಟವರ ಪೈಕಿ 12 ಮಂದಿಗೆ ತಲೆಗೆ ಗುಂಡಿಕ್ಕಿ ಹತ್ಯೆಗೈಯಲಾಗಿದ್ದರೆ, ಇನ್ನೋರ್ವನ ಹೆಗಲಿಗೆ ಆದ ಬುಲೆಟ್ ಗಾಯಗಳಿಂದಾಗಿ ಸಾವನ್ನಪ್ಪಿದ್ದಾನೆ. ಪ್ರತ್ಯೇಕ ಕುರ್ದಿಷ್ ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ಪಿಕೆಕೆ ಬಂಡುಕೋರ ವಿರುದ್ಧ ಟರ್ಕಿಯ ಗಡಿಯಲ್ಲಿ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಶವಗಳು ಪತ್ತೆಯಾಗಿವೆ.

 ಕುರ್ದ್ ಹೋರಾಟಗಾರರ ಜೊತೆ ನಡೆದ ಭೀಕರ ಸಂಘರ್ಷದ ಬಳಿಕ ಈ ಗುಹಾ ಸಂಕೀರ್ಣವನ್ನು ಟರ್ಕಿ ಪಡೆಗಳು ವಶಕ್ಕೆ ಪಡೆದುಕೊಂಡಿದ್ದವು. ಟರ್ಕಿ ಪಡೆಗಳು ಕಾರ್ಯಾಚರಣೆ ಆರಂಭಿಸಿದ ಸಂದರ್ಭದಲ್ಲ್ಲಿ ಟರ್ಕಿ ಪೌರರನ್ನು ಕುರ್ದಿಷ್ ಬಂಡುಕೋರರು ಹತ್ಯೆಗೈದಿರುವ ಸಾಧ್ಯತೆಯಿದೆಯೆಂದು ಶಂಕಿಸಲಾಗಿದೆ.

  ಗುಹಾ ಸಂಕೀರ್ಣದ ಮೇಲೆ ಟರ್ಕಿ ಪಡೆಗಳು ನಡೆಸಿದ ದಾಳಿಯಲ್ಲಿ 48 ಪಿಕೆಕೆ ಬಂಡುಕೋರರು ಹತರಾಗಿದ್ದಾರೆಂದು ಹುಲುಸಿ ಅಕ್ಸಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News