ನವಾಲ್ನಿಯನ್ನು ಬಿಡುಗಡೆ ಮಾಡಿ: ರಶ್ಯಕ್ಕೆ ಯುರೋಪ್ ನ್ಯಾಯಾಲಯ ಕರೆ ತಿರಸ್ಕರಿಸಿದ ರಶ್ಯ

Update: 2021-02-18 18:05 GMT

ಮಾಸ್ಕೋ (ರಶ್ಯ), ಫೆ. 18: ಜೈಲಿನಲ್ಲಿರುವ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿಯ ಪ್ರಾಣ ಅಪಾಯದಲ್ಲಿರುವುದರಿಂದ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಯುರೋಫ್‌ನ ಮಾನವಹಕ್ಕುಗಳ ನ್ಯಾಯಾಲಯ ಬುಧವಾರ ರಶ್ಯವನ್ನು ಒತ್ತಾಯಿಸಿದೆ. ಆದರೆ, ಈ ಕರೆಯನ್ನು ರಶ್ಯ ತಿರಸ್ಕರಿಸಿದೆ.

ವಿಷಪ್ರಾಶನಕ್ಕಾಗಿ ಜರ್ಮನಿಯಲ್ಲಿ ಚಿಕಿತ್ಸೆ ಪಡೆದ ಬಳಿಕ ಕಳೆದ ತಿಂಗಳು ರಶ್ಯಕ್ಕೆ ಮರಳಿದ್ದ ನವಾಲ್ನಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದಾರೆ. ಅವರ ಬಂಧನವನ್ನು ಪ್ರತಿಭಟಿಸಿ ರಶ್ಯಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದಿವೆ. ಅವರನ್ನು ತಕ್ಷಣ ಬಿಡುಗಡೆ ಮಾಡುವಮತೆ ಪಾಶ್ಚಿಮಾತ್ಯ ದೇಶಗಳು ರಶ್ಯದ ಮೇಲೆ ಒತ್ತಡ ಹೇರಿವೆ.

ನನ್ನ ಬಿಡುಗಡೆಗೆ ಪ್ರಯತ್ನಿಸುವಂತೆ ನವಾಲ್ನಿ ಜನವರಿ 20ರಂದು ಯುರೋಪಿಯನ್ ಮಾನವಹಕ್ಕುಗಳ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನಾನು ಜೈಲಿನಲ್ಲೇ ಇದ್ದರೆ ನನ್ನ ಜೀವಕ್ಕೆ ಅಪಾಯವಿದೆ ಎಂದು ಅವುರ ಹೇಳಿದ್ದರು.

ನವಾಲ್ನಿಯ ಈ ಮನವಿಯನ್ನು ತಾನು ಎತ್ತಿಹಿಡಿದಿರುವುದಾಗಿ ಸ್ಟ್ರಾಸ್‌ಬರ್ಗ್‌ನಲ್ಲಿರುವ ನ್ಯಾಯಾಲವಯವು ಬುಧವಾರ ಹೇಳಿದೆ ಹಾಗೂ ನವಾಲ್ನಿಯನ್ನು ತಕ್ಷಣ ಬಿಡುಗಡೆ ಮಡುವಂತೆ ರಶ್ಯಕ್ಕೆ ಕರೆ ನೀಡಿದೆ.

ಆದರೆ, ಬಳಿಕ ಹೇಳಿಕೆಯೊಂದನ್ನು ನೀಡಿದ ರಶ್ಯದ ಕಾನೂನು ಸಚಿವಾಲಯ, ನ್ಯಾಯಾಲಯದ ಬೇಡಿಕೆಗಳು ಕಾನೂನುಬಾಹಿರ ಹಾಗೂ ಅಸಂಬದ್ಧವಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News