ಮ್ಯಾನ್ಮಾರ್: ನಾಗರಿಕ ಸರಕಾರಕ್ಕೆ ಅಧಿಕಾರ ಮರಳಿಸಿ ಸೇನೆಗೆ ಅಮೆರಿಕ ಒತ್ತಾಯ

Update: 2021-02-24 17:42 GMT

ವಾಶಿಂಗ್ಟನ್, ಫೆ. 24: ಮ್ಯಾನ್ಮಾರ್‌ನ ಸೇನಾ ಸರಕಾರವು ದೇಶದ ಆಡಳಿತವನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರಕಾರಕ್ಕೆ ಹಸ್ತಾಂತರಿಸಬೇಕು ಎಂದು ಅವೆುರಿಕ ಹೇಳಿದೆ. ದೇಶದಲ್ಲಿ ನಾಗರಿಕ ಸರಕಾರ ಮರುಸ್ಥಾಪನೆಯಾಗಬೇಕೆನ್ನುವ ಜನರ ಪರವಾಗಿ ತಾನು ನಿಲ್ಲುವುದಾಗಿ ಅದು ಹೇಳೀದೆ.

ಮ್ಯಾನ್ಮಾರ್ ಸೇನೆಯು ಈ ತಿಂಗಳ ಆರಂಭದಲ್ಲಿ ಕ್ಷಿಪ್ರಕ್ರಾಂತಿಯ ಮೂಲಕ ದೇಶದ ಆಡಳಿತದ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಂಡಿದೆ. ದೇಶದ ನಾಯಕಿ ಆಂಗ್ ಸಾನ್ ಸೂ ಕಿ ಮತ್ತು ಅಧ್ಯಕ್ಷ ಯು. ವಿನ್ ಮ್ಯಿಂಟ್ ಸೇರಿದಂತೆ ಹಲವು ಉನ್ನತ ನಾಗರಿಕ ನಾಯಕರನ್ನು ಅದು ಬಂಧಿಸಿದೆ.

‘‘ಮ್ಯಾನ್ಮಾರ್‌ನ ಸೇನಾ ಸರಕಾರಕ್ಕೆ ನಾವು ನೀಡುವ ಸಂದೇಶದಲ್ಲಿ ಬದಲಾವಣೆಯಾಗಿಲ್ಲ. ಅವರು ಅಧಿಕಾರ ತೊರೆಯಬೇಕು ಹಾಗೂ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರಕಾರವನ್ನು ಅವರು ಮರುಸ್ಥಾಪಿಸಬೇಕು. ಬರ್ಮ (ಮ್ಯಾನ್ಮಾರ್‌ನ ಹಿಂದಿನ ಹೆಸರು)ದ ಜನತೆಗೆ ನಾವು ನೀಡುವ ಸಂದೇಶದಲ್ಲಿ ಯಾವುದೇ ಬದಲಾವಣೆಯಿಲ್ಲ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಮ್ಯಾನ್ಮಾರ್‌ನ ಸೇನಾ ನಾಯಕರ ಮೇಲೆ ಅಮೆರಿಕ ದಿಗ್ಬಂಧನ ವಿಧಿಸಿದ ಒಂದು ದಿನದ ಬಳಿಕ ಪ್ರೈಸ್ ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News